ರಾಮಮಂದಿರ ದೇಣಿಗೆ ಅಕ್ರಮ ಆರೋಪ: ನಿಷ್ಪಕ್ಷಪಾತ ತನಿಖೆಗೆ ಮಹಂತ್ ಆಗ್ರಹ
ಅಯೋಧ್ಯೆ/ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಬರುತ್ತಿರುವ ಭಕ್ತರ ದೇಣಿಗೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪದ ಸುತ್ತ ರಾಜಕೀಯ ಹೈಡ್ರಾಮಾ ಮತ್ತು ಧಾರ್ಮಿಕ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ. ಈ ವಿವಾದದ ಕುರಿತು ರಾಮಮಂದಿರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಮಹಂತ್ ಕಮಲ್ ನಯನ್ ದಾಸ್ ಅವರು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದರೆ, ಇತ್ತ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಮಂದಿರದ ದೇಣಿಗೆ ಸಂಗ್ರಹಣೆಯಲ್ಲಿ ಭಾರಿ ಅಕ್ರಮಗಳು ನಡೆಯುತ್ತಿವೆ ಎಂದು ಇತ್ತೀಚೆಗೆ ಶ್ರೀರಾಮ ಜನ್ಮಭೂಮಿ ದೇಣಿಗೆ ವಿಭಾಗದ ಮಾಜಿ ಲೆಕ್ಕಪತ್ರ ಉಸ್ತುವಾರಿ (Accounts In-charge) ಮಹಿಪಾಲ್ ಸಿಂಗ್ ಎಂಬುವವರು ಕ್ಯಾಮೆರಾ ಮುಂದೆ ಬಹಿರಂಗ ಆಕ್ಷೇಪಾರ್ಹ ಹೇಳಿಕೆ ನೀಡಿದ ಬೆನ್ನಲ್ಲೇ ಈ ವಿವಾದ ಭುಗಿಲೆದ್ದಿದೆ.
ತನಿಖೆ ಪಾರದರ್ಶಕವಾಗಿರಲಿ: ಮಹಂತ್ ಕಮಲ್ ನಯನ್ ದಾಸ್ ಅಯೋಧ್ಯೆಯಲ್ಲಿ ಈ ಬಗ್ಗೆ ಮಾತನಾಡಿರುವ ಮಹಂತ್ ಕಮಲ್ ನಯನ್ ದಾಸ್, "ಇಂದಿನ ವಾತಾವರಣವು ಸಂಪೂರ್ಣವಾಗಿ ಆರೋಪ ಮತ್ತು ಪ್ರತ್ಯಾರೋಪಗಳಿಂದ ಕೂಡಿದೆ. ಒಂದು ಕಡೆಯವರು ಮತ್ತೊಂದು ಕಡೆಯವರ ಮೇಲೆ ದೂರುತ್ತಿದ್ದಾರೆ. ಇಂತಹ ಸಮಯದಲ್ಲಿ ತನಿಖೆ ನಡೆಸುವವರ ನಿಷ್ಪಕ್ಷಪಾತತೆ ಮತ್ತು ಪಾರದರ್ಶಕತೆಯ ಮೇಲೆಯೇ ಪ್ರಶ್ನೆಗಳು ಏಳುತ್ತಿವೆ," ಎಂದಿದ್ದಾರೆ. "ಒಂದು ವೇಳೆ ದೇಣಿಗೆಯಲ್ಲಿ ಏನಾದರೂ ತಪ್ಪು ಅಥವಾ ಅಕ್ರಮಗಳು ನಡೆದಿದ್ದರೆ, ಅದರ ಬಗ್ಗೆ ಖಂಡಿತವಾಗಿಯೂ ತನಿಖೆಯಾಗಬೇಕು. ಆದರೆ ಆ ತನಿಖೆಯು ಅತ್ಯಂತ ಪಾರದರ್ಶಕವಾಗಿರಬೇಕು, ಆಗ ಮಾತ್ರ ಭಕ್ತರಿಗೆ ಈ ಪ್ರಕ್ರಿಯೆಯ ಮೇಲೆ ನಂಬಿಕೆ ಬರಲು ಮತ್ತು ಸತ್ಯ ಹೊರಬರಲು ಸಾಧ್ಯ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.