ಹಿಂದೂ ಮಹಾಸಾಗರದಲ್ಲಿ ಇರಾನ್ ತೈಲ ಟ್ಯಾಂಕರ್ ವಶಕ್ಕೆ ಪಡೆದ ಅಮೆರಿಕ: ತಾರಕಕ್ಕೇರಿದ ಉದ್ವಿಗ್ನತೆ
ದುಬೈ: ಇರಾನ್‌ನ ತೈಲ ಕಳ್ಳಸಾಗಣೆಯನ್ನು ತಡೆಯಲು ಕಾರ್ಯಾಚರಣೆ ತೀವ್ರಗೊಳಿಸಿರುವ ಅಮೆರಿಕ ಸೇನೆಯು, ಗುರುವಾರ(ಏ.23) ಹಿಂದೂ ಮಹಾಸಾಗರದಲ್ಲಿ ಇರಾನ್ ತೈಲ ಸಾಗಿಸುತ್ತಿದ್ದ ಮತ್ತೊಂದು ಟ್ಯಾಂಕರ್ ಅನ್ನು ತನ್ನ ವಶಕ್ಕೆ ಪಡೆದಿದೆ. ಆಯಕಟ್ಟಿನ ಪ್ರದೇಶವಾದ ಹೋರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು (Revolutionary Guards) ಅಮೆರಿಕದ ಎರಡು ಹಡಗುಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಉಭಯ ದೇಶಗಳ ನಡುವಿನ ಸಂಘರ್ಷ ಈಗ ತಾರಕಕ್ಕೇರಿದೆ.
ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾ ಮತ್ತು ಇಂಡೋನೇಷ್ಯಾ ನಡುವಿನ ಸಮುದ್ರ ಪ್ರದೇಶದಲ್ಲಿ ಸಂಚರಿಸುತ್ತಿದ್ದ 'ಮೆಜೆಸ್ಟಿಕ್ ಎಕ್ಸ್' (Majestic X) ಎಂಬ ಟ್ಯಾಂಕರ್ ಅನ್ನು ಅಮೆರಿಕ ಪಡೆಗಳು ವಶಪಡಿಸಿಕೊಂಡಿವೆ. ಅಮೆರಿಕದ ಸೈನಿಕರು ಹಡಗಿನ ಡೆಕ್ ಮೇಲೆ ಇರುವ ವಿಡಿಯೋವನ್ನು ಪೆಂಟಗನ್ ಬಿಡುಗಡೆ ಮಾಡಿದೆ. ಗಯಾನಾ ಧ್ವಜ ಹೊಂದಿರುವ ಈ ಹಡಗು ಈ ಹಿಂದೆ 'ಫೋನಿಕ್ಸ್' ಎಂಬ ಹೆಸರನ್ನು ಹೊಂದಿತ್ತು. ಇರಾನ್‌ನಿಂದ ಕಚ್ಚಾ ತೈಲವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಾರಣಕ್ಕಾಗಿ 2024 ರಲ್ಲಿ ಅಮೆರಿಕ ಈ ಹಡಗಿನ ಮೇಲೆ ನಿರ್ಬಂಧ ಹೇರಿತ್ತು. ಈ ಹಡಗು ಚೀನಾದ ಝೌಶಾನ್ ನಗರಕ್ಕೆ ತೆರಳುತ್ತಿತ್ತು ಎಂದು ಹಡಗು ಟ್ರ್ಯಾಕಿಂಗ್ ಡೇಟಾ ತಿಳಿಸಿದೆ.
"ಅಕ್ರಮ ಜಾಲಗಳನ್ನು ಧ್ವಂಸಗೊಳಿಸಲು ಮತ್ತು ಇರಾನ್‌ಗೆ ಭೌತಿಕ ಬೆಂಬಲ ನೀಡುವ ಹಡಗುಗಳನ್ನು ತಡೆಯಲು ನಾವು ಜಾಗತಿಕ ಕಡಲ ಜಾರಿ ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ," ಎಂದು ಪೆಂಟಗನ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $100 (ಅಂದಾಜು 8,300) ದಾಟಿದೆ. ಇದು ಯುದ್ಧಪೂರ್ವ ಮಟ್ಟಕ್ಕಿಂತ 35% ಹೆಚ್ಚಳವಾಗಿದೆ. ತೈಲ ಬೆಲೆ ಏರಿಕೆಯು ಆಹಾರ ಮತ್ತು ಇತರೆ ಅಗತ್ಯ ವಸ್ತುಗಳ ಸಾಗಾಣಿಕೆ ವೆಚ್ಚವನ್ನು ಹೆಚ್ಚಿಸಿದ್ದು, ಗ್ರಾಹಕರ ಮೇಲೆ ಬರೆ ಎಳೆದಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು, ತೈಲ ಪೂರೈಕೆಯ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.