ಇರಾನ್‌ಗೆ ಡ್ರೋನ್ ತಂತ್ರಜ್ಞಾನ ನೀಡಿದ್ದೇವೆ ಎಂಬುದು ಸುಳ್ಳು: ರಷ್ಯಾ
ಮಾಸ್ಕೊ: ರಷ್ಯಾ ತನ್ನ ಡ್ರೋನ್ ತಂತ್ರಜ್ಞಾನವನ್ನು ಇರಾನ್ ಜೊತೆ ಹಂಚಿಕೊಂಡಿದೆ ಎಂಬುದಾಗಿ ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿಯು ಆಧಾರರಹಿತವಾದದ್ದು ಎಂದು 'ಕ್ರೆಮ್ಲಿನ್' ವಕ್ತಾರ ಡಿಮಿಟ್ರಿ ಪೆಸ್ಕೊವ್ ಬುಧವಾರ ಹೇಳಿದ್ದಾರೆ. ಇಸ್ರೇಲ್ ಹಾಗೂ ಅಮೆರಿಕ ಪಡೆಗಳು ಇರಾನ್ ಮೇಲೆ ಫೆಬ್ರುವರಿ 28ರಂದು ಜಂಟಿ ದಾಳಿ ನಡೆಸಿದ್ದವು. ಈ ವೇಳೆ, ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿ ಸೇರಿದಂತೆ ಹಲವು ಮಂದಿ ಹತ್ಯೆಯಾಗಿದ್ದರು. ಇದರ ಬೆನ್ನಲ್ಲೇ ಇರಾನ್ ಪ್ರತಿದಾಳಿ ನಡೆಸಿದ್ದು, ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನತೆ ಸೃಷ್ಟಿಯಾಗಿದೆ. ಇರಾನ್ ಪ್ರತೀಕಾರದ ಪರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. 'ತನ್ನ ಮೇಲಿನ ದಾಳಿಗೆ ಇರಾನ್ ಈ ರೀತಿ ಪ್ರತಿಕ್ರಿಯಿಸಬಹುದು ಎಂದು ಭಾವಿಸಿರಲಿಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ರಷ್ಯಾ ಉಪಗ್ರಹ ಆಧಾರಿತ ಚಿತ್ರಗಳು, ಗುಪ್ತಚರ ಮಾಹಿತಿ, ಸುಧಾರಿತ ಡ್ರೋನ್ ತಂತ್ರಜ್ಞಾನವನ್ನು ಇರಾನ್ ಜೊತೆ ಹಂಚಿಕೊಂಡಿದೆ. ರಕ್ಷಣಾ ಸಹಕಾರವನ್ನು ವಿಸ್ತರಿಸಿದೆ ಎಂದು ವರದಿಯಾಗಿದೆ. ಈ ಸುದ್ದಿಯನ್ನು ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್ ವಕ್ತಾರ ಅಲ್ಲಗಳೆದಿದ್ದಾರೆ.