H-1B Visa ಶುಲ್ಕ ಹೆಚ್ಚಳಕ್ಕೆ ಮುಂದಾದ ಅಮೆರಿಕ: ಭಾರತೀಯರ ಮೇಲೆ ಹೆಚ್ಚು ಪರಿಣಾಮ
ನವದೆಹಲಿ: ಎಚ್–1ಬಿ ವೀಸಾ ಮತ್ತು ಎಫ್–1 ಐಚ್ಛಿಕ ಪ್ರಾಯೋಗಿಕ ತರಬೇತಿ(ಒಪಿಟಿ) ಕಾರ್ಯಕ್ರಮಗಳ ಮೇಲೆ ಹೊಸ ಶುಲ್ಕ ವಿಧಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಮುಂದಾಗಿದೆ ಎಂದು ವರದಿ ತಿಳಿಸಿದೆ.
ಎಚ್–1ಬಿ ವೀಸಾ ಶುಲ್ಕವನ್ನು 1,03,265 ಡಾಲರ್‌ಗೆ(ಸುಮಾರು ₹99 ಲಕ್ಷ) ಹೆಚ್ಚಿಸುವ ಕುರಿತಂತೆ ಪ್ರಸ್ತಾಪಿತ ನಿಯಮಾವಳಿಯನ್ನು ಅಮೆರಿಕದ ಗೃಹ ಇಲಾಖೆ ಬಿಡುಗಡೆ ಮಾಡಿದೆ. ಕಳೆದ ವರ್ಷ ಟ್ರಂಪ್ ಆಡಳಿತವು ಎಚ್–1ಬಿ ವೀಸಾ ಮೇಲೆ ವಿಧಿಸಿದ್ದ ಹೆಚ್ಚುವರಿ ಶುಲ್ಕವನ್ನು ನ್ಯಾಯಾಲಯ ರದ್ದು ಮಾಡಿತ್ತು. ಪ್ರಸ್ತಾಪಿತ ನಿಯಮಗಳು ಜಾರಿಗೆ ಬಂದರೆ, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಪ್ರಜೆಗಳು, ವಿಶ್ವವಿದ್ಯಾಲಯಗಳಿಂದ ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ವಿದ್ಯಾರ್ಥಿಗಳ ವೆಚ್ಚ ಹೆಚ್ಚಾಗುತ್ತದೆ ಎಂದು ವರದಿ ತಿಳಿಸಿದೆ.
ಈ ದಿಢೀರ್ ಬದಲಾವಣೆಯು ಭಾರತೀಯರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಏಕೆಂದರೆ, ಒಟ್ಟು ಎಚ್-1ಬಿ ವೀಸಾ ಫಲಾನುಭವಿಗಳ ಪೈಕಿ ಶೇ 70ಕ್ಕಿಂತ ಹೆಚ್ಚು ಮಂದಿ ಭಾರತೀಯರೇ ಆಗಿದ್ದಾರೆ. 2024ರಲ್ಲಿ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆಯು ಒಟ್ಟು 3,99,402 ಎಚ್-1ಬಿ ವೀಸಾ ಅರ್ಜಿಗಳಿಗೆ ಅನುಮೋದನೆ ನೀಡಿತ್ತು. ಈ ಪೈಕಿ ಶೇ 71ರಷ್ಟು ಮಂದಿ ಭಾರತೀಯರೇ ಆಗಿದ್ದರು. ಈ ಪ್ರಸ್ತಾವನೆಯು ಈಗಾಗಲೇ ಶ್ವೇತಭವನದ ನಿರ್ವಹಣೆ ಮತ್ತು ಬಜೆಟ್ ಕಚೇರಿಗೆ ತಲುಪಿದ್ದು ಪರಿಶೀಲನೆಯಲ್ಲಿದೆ.