EXPLAINER: ಅಮೆರಿಕ–ಇರಾನ್ ಒಪ್ಪಂದದಿಂದ ಭಾರತಕ್ಕೇನು ಲಾಭ? ಇಳಿಯುವುದೇ ತೈಲ ದರ?
ವಾಷಿಂಗ್ಟನ್/ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಶಾಶ್ವತ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಮುಂಬರುವ ಶುಕ್ರವಾರ (ಜೂನ್ 19) ಅಧಿಕೃತವಾಗಿ ಸಹಿ ಬೀಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಮಹತ್ವದ ನಿರ್ಧಾರದಿಂದಾಗಿ ಯುದ್ಧದ ಭೀತಿಯಲ್ಲಿದ್ದ ಜಗತ್ತು ನಿಟ್ಟುಸಿರು ಬಿಡುವಂತಾಗಿದ್ದು, ತೈಲ ಹಾಗೂ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ಭಾರತಕ್ಕೆ ಈ ಬೆಳವಣಿಗೆ ದೊಡ್ಡ ನಿರಾಳ ಎನಿಸಿದೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಸಂಘರ್ಷದಿಂದ ಜಾಗತಿಕವಾಗಿ ಆರ್ಥಿಕತೆ ಹಳಿ ತಪ್ಪಿತ್ತು. ಅಮೆರಿಕ, ಇಸ್ರೇಲ್ ಮತ್ತು ಇರಾನ್ ದೇಶಗಳ ಮಧ್ಯೆ ನಡೆದ ಯುದ್ಧ ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಇರಾನ್ ಪ್ರತಿತಂತ್ರವಾಗಿ ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ ‘ಹೊರ್ಮುಜ್ ಜಲಸಂಧಿ’ಯನ್ನು ಬಂದ್ ಮಾಡಿತ್ತು. ಜೊತೆಗೆ ಈ ಮಾರ್ಗದಲ್ಲಿ ಸಾಗುವ ಹಡಗುಗಳ ಮೇಲೆ ಭಾರಿ ಪ್ರಮಾಣದ ಶುಲ್ಕ ವಿಧಿಸಿತ್ತು. ಆದರೆ ಈಗ ಒಪ್ಪಂದದ ಭಾಗವಾಗಿ ಇರಾನ್ ಈ ದಿಗ್ಬಂಧನ ತೆರವುಗೊಳಿಸಲು ಮತ್ತು ಶುಲ್ಕವನ್ನು ರದ್ದುಗೊಳಿಸಲು ಒಪ್ಪಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಬಂದರುಗಳ ಮೇಲಿನ ದಿಗ್ಬಂಧನವನ್ನು ಹಿಂಪಡೆಯಲು ಅಮೆರಿಕ ಕೂಡ ಸಮ್ಮತಿಸಿದೆ ಎಂದು ವರದಿಗಳು ಖಚಿತಪಡಿಸಿವೆ.
ಏನಿದು ಹೊರ್ಮುಜ್ ಜಲಸಂಧಿ ವಿವಾದ? ಪರ್ಷಿಯನ್ ಮತ್ತು ಒಮಾನ್ ಗಲ್ಫ್ ಸಂಪರ್ಕಿಸುವ ಹೊರ್ಮುಜ್ ಜಲಸಂಧಿಯು ಇರಾನ್ ಪರದಿಯಲ್ಲಿದೆ. ಹೀಗಾಗಿ ಇದರ ಮೇಲಿನ ಸಂಪೂರ್ಣ ನಿಯಂತ್ರಣ ತನಗೆ ಸೇರಿದ್ದು ಎಂದು ಇರಾನ್ ಪ್ರತಿಪಾದಿಸುತ್ತಾ ಬಂದಿದೆ. ಈ ಭಾಗದಲ್ಲಿರುವ ಕನಿಷ್ಠ ಐದು ದ್ವೀಪಗಳು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ನಿಯಂತ್ರಣದಲ್ಲಿವೆ. ಅಲ್ಲದೆ ಅಮೆರಿಕದ ದಾಳಿಯನ್ನು ಎದುರಿಸಲು ಇರಾನ್ ಈ ಜಲಸಂಧಿಯಲ್ಲಿ ನೂರಾರು ಅತ್ಯಾಧುನಿಕ ಸಬ್‌ಮರೀನ್, ಯುದ್ಧ ವಿಮಾನಗಳು, ಕ್ಷಿಪಣಿಗಳು, ಲಘು ಡ್ರೋನ್‌ಗಳನ್ನು ನಿಯೋಜಿಸಿತ್ತು. ಯುದ್ಧ ತಾರಕಕ್ಕೇರಿದಾಗ ಇರಾನ್ ತನ್ನ ಮಿತ್ರ ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳ ಹಡಗುಗಳಿಗೆ ತಲಾ 20 ಲಕ್ಷ ಡಾಲರ್ (ಸುಮಾರು ₹16.6 ಕೋಟಿ) ಸಾರಿಗೆ ಶುಲ್ಕ ವಿಧಿಸಿತ್ತು. ಸಣ್ಣ ಹಡಗುಗಳಿಗೆ ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 1 ಡಾಲರ್ ಟೋಲ್ ಘೋಷಿಸಿತ್ತು. ಇದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿತ್ತು. ಭಾರತದ ಮೇಲಾಗುವ ಪರಿಣಾಮಗಳೇನು? ಭಾರತ ಶೇ 85ರಷ್ಟು ಇಂಧನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತಕ್ಕೆ ಬರುವ ಒಟ್ಟು ಇಂಧನದ ಶೇ 55ರಷ್ಟು ಇದೇ ಮಾರ್ಗವಾಗಿ ಹಾದು ಬರುತ್ತದೆ. ಆದ್ದರಿಂದ ಭಾರತಕ್ಕೆ ಈ ಜಲಸಂಧಿಯೇ ಜೀವಾಳವಾಗಿದೆ. ಇದು ಮುಕ್ತವಾಗುವುದರಿಂದ ಭಾರತದಲ್ಲಿ ತೈಲ ಬಿಕ್ಕಟ್ಟು ನಿವಾರಣೆಯಾಗಿ, ಪೆಟ್ರೋಲ್-ಡೀಸೆಲ್ ದರಗಳು ಗಣನೀಯವಾಗಿ ಇಳಿಕೆಯಾಗಲಿವೆ.