Namma Metro: ಬೆಂಗಳೂರಿಂದ ತುಮಕೂರು 1 ತಾಸಿನ ಹಾದಿ, ಮೆಟ್ರೋ ಮಾರ್ಗಕ್ಕೆ ಇನ್ನೂ 2 ಹೆಜ್ಜೆ ಬಾಕಿ; 1.26 ಕೋಟಿಯ ಡಿಪಿಆರ್‌ನಲ್ಲಿ ಇರೋದೇನು?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಿಂದ (Bengaluru) ತುಮಕೂರಿಗೆ ಪ್ರತಿದಿನ ಕೆಲಸ-ಕಾರ್ಯಗಳಿಗಾಗಿ ಸಂಚರಿಸುವ ಲಕ್ಷಾಂತರ ಜನರಿಗೆ ರಾಜ್ಯ ಸರ್ಕಾರದಿಂದ (Karnataka Government) ಭರ್ಜರಿ ಗುಡ್ ನ್ಯೂಸ್! ಬಹುನಿರೀಕ್ಷಿತ 'ಬೆಂಗಳೂರು-ತುಮಕೂರು ಮೆಟ್ರೋ' (Bengaluru-Tumakuru Metro) ಯೋಜನೆ ಈಗ ಮಹತ್ವದ ಘಟ್ಟ ತಲುಪಿದ್ದು, ಮೇ 23, 2026 ರಂದು ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ವಿಸ್ತೃತ ಯೋಜನಾ ವರದಿ (DPR) ಸಲ್ಲಿಕೆಯಾಗಿದೆ.
ಮೆಟ್ರೋ ಮಾರ್ಗ: ಪ್ರಸ್ತುತ ಇರುವ 'ನಮ್ಮ ಮೆಟ್ರೋ' ಹಸಿರು ಮಾರ್ಗವನ್ನು (Green Line) ಬೆಂಗಳೂರಿನ ಮಾದಾವರದಿಂದ (BIEC) ತುಮಕೂರುವರೆಗೆ ವಿಸ್ತರಿಸಲಾಗುತ್ತದೆ. ಇದು ಶಿರಾ ಗೇಟ್ ಅಥವಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ (ನಾಗಣ್ಣನಪಾಳ್ಯ) ಬಳಿ ಅಂತ್ಯಗೊಳ್ಳುವ ಸಾಧ್ಯತೆಯಿದೆ.
ಒಟ್ಟು ದೂರ: ಇದು ಅಂದಾಜು 59.6 ಕಿ.ಮೀ (56-60 ಕಿ.ಮೀ) ಉದ್ದದ ಬೃಹತ್ ಎಲಿವೇಟೆಡ್ (ಮೇಲ್ಸೇತುವೆ) ಮಾರ್ಗವಾಗಿರಲಿದೆ. ನಿಲ್ದಾಣಗಳು: ಈ ಮಾರ್ಗದಲ್ಲಿ ನೆಲಮಂಗಲ, ಡಾಬಸ್‌ಪೇಟೆ ಮತ್ತು ಕ್ಯಾತಸಂದ್ರ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಒಟ್ಟು 16 ನಿಲ್ದಾಣಗಳಿರಲಿವೆ. ನಗರ ಪ್ರದೇಶದ ಮೆಟ್ರೋಗೆ ಹೋಲಿಸಿದರೆ ಇಲ್ಲಿ ನಿಲ್ದಾಣಗಳ ನಡುವಿನ ಅಂತರ ಹೆಚ್ಚಿರಲಿದ್ದು (ಸುಮಾರು 4-5 ಕಿ.ಮೀ), ರೈಲಿನ ವೇಗವೂ ಹೆಚ್ಚಿರಲಿದೆ. ಸಮಯ ಉಳಿತಾಯ: ಟ್ರಾಫಿಕ್ ಕಿರಿಕಿರಿಯಿಲ್ಲದೆ ಕೇವಲ 59-60 ನಿಮಿಷಗಳಲ್ಲಿ ಬೆಂಗಳೂರಿನಿಂದ ತುಮಕೂರು ತಲುಪಬಹುದಾಗಿದೆ.