BSY: ಬಿಎಸ್‌ವೈ ನಮಗೆ ತಂದೆಯಷ್ಟೇ ಅಲ್ಲ, ಆದರ್ಶ ಗುರು - ಸಿಎಂ ಆಗುವ ಕನಸು ಹೊತ್ತು ರಾಜಕಾರಣ ಮಾಡಿದವರಲ್ಲ
ಬಿ.ಎಸ್. ಯಡಿಯೂರಪ್ಪನವರು ನಮಗೆ ತಂದೆಯಷ್ಟೇ ಅಲ್ಲ, ಅವರೊಬ್ಬ ಆದರ್ಶ ಗುರು, ಮಾರ್ಗದರ್ಶಕರು, ಎಲ್ಲವೂ ಆಗಿದ್ದಾರೆ. ಜೀವನದಲ್ಲಿ ಸಮಸ್ಯೆ, ಸಂಕಷ್ಟಗಳು ಎದುರಾದಾಗ ಧೃತಿಗೆಡಬಾರದು, ಕುಗ್ಗಬಾರದು, ಅಂಜಬಾರದು. ಎದುರಾಗುವ ಯಾವುದೇ ಪರಿಸ್ಥಿತಿಯನ್ನೂ ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಬೇಕು. ಇದರ ಫಲಶೃತಿ ಒಳ್ಳೆಯದೇ ಆಗಿರುತ್ತದೆ ಎಂಬುದು ಅವರು ನಮಗೆ ಹೇಳಿಕೊಟ್ಟ ಜೀವನ ಪಾಠ. ಅವರು ನಡೆದು ಬಂದ ಹಾದಿ, ಎದುರಿಸಿದ ಕಷ್ಟಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಜನರಿಗಾಗಿ ಜೀವನ ಅರ್ಪಣೆ ಸಾರ್ವಜನಿಕ ಬದುಕಿನಲ್ಲಿರುವಾಗ ರಾಜಕೀಯ ದ್ವೇಷಕ್ಕಾಗಿ ಶಿಕಾರಿಪುರದಲ್ಲಿ ನಡೆದ ಮಾರಣಾಂತಿಕ ಹಲ್ಲೆ ಎಂತಹ ಹೋರಾಟಗಾರನನ್ನೂ ಧೃತಿಗೆಡಿಸಿಬಿಡುತ್ತಿತ್ತು.
ಆದರೆ ನನ್ನ ತಂದೆ ಇದನ್ನು ದೇವರು ಕರುಣಿಸಿದ ಮರುಜನ್ಮ ಎಂದು ಪರಿಗಣಿಸಿ, ‘ಜೀವನಪೂರ್ತಿ ಜನರಿಗಾಗಿ ನನ್ನನ್ನು ನಾನು ಸಮರ್ಪಿಸಿಕೊಳ್ಳುತ್ತೇನೆ. ಸಂಘದ ಧ್ಯೇಯ ಸಿದ್ಧಾಂತದನುಸಾರ ರಾಜಕೀಯ ಸಂಘಟನೆ ಮಾಡುತ್ತೇನೆ. ಅಣ್ಣ ಬಸವಣ್ಣ ಅವರ ಕಾಯಕ ಶ್ರೇಷ್ಠತೆಯನ್ನು ಸಾರುವ ನಿಟ್ಟಿನಲ್ಲಿ ರೈತರೂ ಸೇರಿದಂತೆ ಸರ್ವ ಸಮುದಾಯಗಳ ಏಳಿಗಾಗಿ ಹೋರಾಡುತ್ತೇನೆ’ ಎಂಬ ಮಹಾಸಂಕಲ್ಪ ತೊಟ್ಟು ಇಲ್ಲಿಯವರೆಗೂ ನಡೆದು ಬಂದಿದ್ದಾರೆ. ಅವರು ನಡೆದು ಬಂದ ಈ 50 ವರ್ಷಗಳ ಸಾರ್ವಜನಿಕ ಬದುಕಿನ ಹಾದಿಯಲ್ಲಿ ಅವರು ಕುಟುಂಬ ಸೌಖ್ಯಕ್ಕೆ ಆದ್ಯತೆ ನೀಡಲಿಲ್ಲ. ಆದರೆ ನಮ್ಮ ತಾಯಿಯವರೂ ಸೇರಿದಂತೆ ಇಡೀ ಕುಟುಂಬ ಅವರ ರಾಜಕೀಯ ಬದುಕಿನ ಹೋರಾಟಗಳಿಗೆ ನೆರವಾಗುವುದು ನಮ್ಮ ಆದ್ಯ ಕರ್ತವ್ಯವೆಂದು ಭಾವಿಸಿ ಅವರ ನೆರಳು ಅನುಸರಿಸಿ ಸಾರ್ಥಕತೆಯನ್ನು ಪಡೆದುಕೊಂಡಿದ್ದೇವೆ.