Select Location
All Locations
State
Region
City / District
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪವಿಲ್ಲ: ಜೋಶಿ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪವಿಲ್ಲ: ಜೋಶಿ

ದಾವಣಗೆರೆ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ನಿಶ್ಚಿತ. ಸೋಲಿನ ಭಯದಿಂದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಟ್ರಾಂಗ್ ರೂಮ್‌ಗೆ ನುಗ್ಗುವುದು, ಅಧಿಕಾರಿಗಳನ್ನು ನಿಂದಿಸುವುದು ಮತ್ತು ಅಂಚೆ ಮತಪತ್ರಗಳ ವಿಂಗಡಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದು ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದಿರುವುದನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳಲ್ಲಿ ಭಾರತೀಯ ಜನತಾ ಪಾರ್ಟಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಭೂತಪೂರ್ವ ಸಾಧನೆ ಮಾಡಲಿದೆ. ಅಸ್ಸಾಂನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ, ತಮಿಳುನಾಡಿನಲ್ಲಿ ಎಐಡಿಎಂಕೆ-ಬಿಜೆಪಿ ಮೈತ್ರಿಕೂಟ ಉತ್ತಮ ಸಾಧನೆ ಮಾಡಲಿದೆ ಮತ್ತು ಕೇರಳದಲ್ಲಿ ಪಕ್ಷದ ಬಲ ವೃದ್ಧಿಸಲಿದೆ ಎಂದರು. ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಅಪ್ರಸ್ತುತವಾಗುತ್ತಿದೆ. ಅಸ್ಸಾಂ ಮತ್ತು ಬಂಗಾಳದಲ್ಲಿ ಆ ಪಕ್ಷ ಶೂನ್ಯಕ್ಕೆ ಇಳಿಯಲಿದೆ. ತಮಿಳುನಾಡಿನಲ್ಲಿ ದಶಕಗಳ ಕಾಲ ಆಳಿದವರು ಇಂದು ಕೇವಲ ಜೂನಿಯರ್ ಪಾರ್ಟ್ನರ್ ಆಗಿ ಉಳಿದಿದ್ದಾರೆ ಎಂದರು.

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಕುರಿತು ಸ್ಪಷ್ಟನೆ ನೀಡಿದ ಸಚಿವರು, ಇದರಲ್ಲಿ ಸರ್ಕಾರದ ನೇರ ಹಸ್ತಕ್ಷೇಪವಿಲ್ಲ. ಗೃಹ ಬಳಕೆ ಗ್ಯಾಸ್ ದರ ಏರಿಸಿಲ್ಲ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ತೈಲ ಕಂಪನಿಗಳ ನಿರ್ಧಾರವಾಗಿದೆ. ಕಾಂಗ್ರೆಸ್ ಕಾಲದಲ್ಲೇ ಈ ಪ್ರಕ್ರಿಯೆಯನ್ನು ಮುಕ್ತಗೊಳಿಸಲಾಗಿದ್ದು (Liberalized), ಬೆಲೆ ನಿರ್ಣಯ ಕಂಪನಿಗಳ ಕೈಯಲ್ಲಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಪೂರೈಕೆಯಲ್ಲಿನ ವ್ಯತ್ಯಯ ಹಾಗೂ ಜಾಗತಿಕ ಮಟ್ಟದ ಅಸ್ಥಿರತೆಯಿಂದಾಗಿ ಬೆಲೆ ಏರಿಕೆಯಾಗಿದೆ.

ಭಾರತವು ಶೇ. 50 ರಷ್ಟು ಆಮದಿನ ಮೇಲೆ ಅವಲಂಬಿತವಾಗಿರುವುದು ಇದಕ್ಕೆ ಪ್ರಮುಖ ಕಾರಣ ಎಂದರು. ನೆರೆಯ ಪಾಕಿಸ್ತಾನದಂತಹ ದೇಶಗಳಲ್ಲಿ ಇಂಧನವಿಲ್ಲದೆ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆದರೆ ಭಾರತದಲ್ಲಿ ಯುದ್ಧದಂತಹ ಪರಿಸ್ಥಿತಿಯ ನಡುವೆಯೂ ಪೆಟ್ರೋಲ್, ಡೀಸೆಲ್ ಅಥವಾ ಗ್ಯಾಸ್ ಕೊರತೆಯಾಗದಂತೆ ನಾವು ನಿಯಂತ್ರಣ ಸಾಧಿಸಿದ್ದೇವೆ. ಜಾಗತಿಕವಾಗಿ ಬೆಲೆ ಇಳಿಕೆಯಾದ ಕೂಡಲೇ ಇಲ್ಲೂ ದರ ಕಡಿಮೆಯಾಗಲಿದೆ ಎಂದು ಜೋಶಿ ಹೇಳಿದರು.


Udayavani 3 days ago
Home Flash News