Select Location
All Locations
State
Region
City / District
ಮೋದಿ ವಿರುದ್ಧದ ಖರ್ಗೆ ಹೇಳಿಕೆಗೆ ವೇದಿಕೆಯಲ್ಲೇ ತಿರುಗೇಟು ನೀಡಿದ ಉಪರಾಷ್ಟ್ರಪತಿ

ಮೋದಿ ವಿರುದ್ಧದ ಖರ್ಗೆ ಹೇಳಿಕೆಗೆ ವೇದಿಕೆಯಲ್ಲೇ ತಿರುಗೇಟು ನೀಡಿದ ಉಪರಾಷ್ಟ್ರಪತಿ

ಬೀದರ್: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕರಿಯರು ಮತ್ತು ಬಿಳಿಯರ ನಡುವೆ ವ್ಯತ್ಯಾಸ ಮಾಡುವುದಿಲ್ಲ. ಅದೇ ರೀತಿ ಅವರು ಕೆಲವೊಮ್ಮೆ ಭಯೋತ್ಪಾದಕರು ಹಾಗೂ ಭಯೋತ್ಪಾದಕರಿಗೆ ಟೆರರ್ ಆಗಿರುವವರ ನಡುವೆಯೂ ಕೂಡ ವ್ಯತ್ಯಾಸ ಮಾಡುವುದಿಲ್ಲ ಎಂದೆನಿಸುತ್ತದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು. ಜಿಲ್ಲೆಯ ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಬುಧವಾರ ಏರ್ಪಡಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ನಮ್ಮ ವಿಚಾರಧಾರೆಗಳ‌ ನಡುವೆ ಸ್ವಲ್ಪಮಟ್ಟಿಗೆ ವ್ಯತ್ಯಾಸವಿದೆ.

ಆದರೆ, ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಟೀಕಿಸಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಮೇಲಿನಂತೆ ಹೇಳಿದರು. ಇದು ಬಸವಣ್ಣನವರ ಪವಿತ್ರ ನೆಲ. ಅವರ ಆಶಯಗಳಂತೆ ಭಾಲ್ಕಿ ಮಠ ಕೆಲಸ‌ ನಿರ್ವಹಿಸುತ್ತಿದೆ. ಈ ಮಠದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರು ಬಸವಣ್ಣನ ತತ್ವಾದರ್ಶಗಳಂತೆ ಕೆಲಸ ಮಾಡುತ್ತಿದ್ದಾರೆ. ಸತ್ಯ, ಸೇವೆ, ಮಾನವೀಯ ನೆಲೆಗಟ್ಟಿನಲ್ಲಿ ಸ್ವಾಮೀಜಿ ಕೆಲಸ ಮಾಡುತ್ತಿದ್ದು, ಅವರನ್ನು ಗೌರವಿಸುವ ಈ ಕಾರ್ಯಕ್ರಮ ಅತ್ಯಂತ ಸ್ತುತ್ಯಾರ್ಹ ಎಂದು ಹೇಳಿದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬಸವಣ್ಣನವರು ಮನುವಾದ, ಚಾತುರ್ವಣ ಪದ್ಧತಿಯನ್ನು ತಿರಸ್ಕರಿಸಿದರು. ಬಸವಣ್ಣನವರು ಅದನ್ನು ಒಪ್ಪಲಿಲ್ಲ. ಹಾಗಾಗಿಯೇ ಹೊಸ ಧರ್ಮ ಸ್ಥಾಪಿಸಿ, ಎಲ್ಲ ಜಾತಿಗಳ ಜನರನ್ನು ಒಂದುಗೂಡಿಸಿದರು. ಹಿಂದುಳಿದ ಸಮಾಜದ ಅಲ್ಲಮಪ್ರಭು ದೇವರನ್ನು ಅನುಭವ ಮಂಟಪದ ಅಧ್ತಕ್ಷರಾಗಿ‌ಮಾಡಿದರು. ಅಂಥ ಶ್ರೇಷ್ಠ ತತ್ವಗಳ ಪ್ರಚಾರ, ಪ್ರಸಾರ ಅಗತ್ಯ‌. ಆ ನಿಟ್ಟಿನಲ್ಲಿ ಬಸವಲಿಂಗ ಪಟ್ಟದ್ದೇವರು ಪ್ರಗತಿಪರ ವಿಚಾರಗಳೊಂದಿಗೆ ಕೆಲಸ ಮಾಡುತ್ತಿದ್ದು, ಅಂಥವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತದೆ ಎಂದರು.


Prajavani 1 hour ago
Home Flash News