Select Location
All Locations
State
Region
City / District
ತಂದೆ, ತಾಯಿಗೆ ನಾನು ಒಳ್ಳೆ ಮಗ ಆಗಲಿಲ್ಲ, ಈಗ ಹೆಸರು ಗಳಿಸಲೂ ಆಗುತ್ತಿಲ್ಲ: ನಲಪಾಡ್‌

ತಂದೆ, ತಾಯಿಗೆ ನಾನು ಒಳ್ಳೆ ಮಗ ಆಗಲಿಲ್ಲ, ಈಗ ಹೆಸರು ಗಳಿಸಲೂ ಆಗುತ್ತಿಲ್ಲ: ನಲಪಾಡ್‌

ಬೆಂಗಳೂರು (ಏ.22): ‘ನಾನಂತೂ ನಮ್ಮ ಅಪ್ಪ, ಅಮ್ಮನಿಗೆ ಒಳ್ಳೆಯ ಮಗನಾಗಲಿಲ್ಲ. ಎಲ್ಲ ರೀತಿಯಲ್ಲೂ ನನ್ನಿಂದ ನನ್ನ ತಂದೆ, ತಾಯಿಗೆ ಕೆಟ್ಟದ್ದೇ ಆಗಿದೆ. ಈಗ ಹಂತ ಹಂತವಾಗಿ ಒಳ್ಳೆಯ ಹೆಸರು ತೆಗೆದುಕೊಳ್ಳಲು ಪ್ರಯತ್ನಿಸಿದರೂ ಆಗುತ್ತಿಲ್ಲ. ನಮ್ಮಪ್ಪ ಎನ್‌.ಎ.ಹ್ಯಾರಿಸ್‌ ಅವರು ಸಚಿವರಾಗುವುದನ್ನು ತಪ್ಪಿಸಲು ಇ.ಡಿ.(ಜಾರಿ ನಿರ್ದೇಶನಾಲಯ) ದಾಳಿ ನಡೆದಿದೆ. ಇದಕ್ಕೆ ನಾನು ನೆಪವಾಗಿದ್ದೇನೆ ಎಂದು ಯುವ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.

ಇ.ಡಿ. ದಾಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಇದು ನೂರಕ್ಕೆ ನೂರರಷ್ಟು ರಾಜಕೀಯ ಪ್ರೇರಿತ ದಾಳಿ. ನಮ್ಮ ತಂದೆಯವರಿಗೆ ಸಚಿವ ಸ್ಥಾನ ತಪ್ಪಿಸಲು ಯಾರೋ ಷಡ್ಯಂತ್ರ ಮಾಡಿದ್ದಾರೆ. ಇದನ್ನು ನಾವು ಕೋರ್ಟ್‌ನಲ್ಲಿ ಎದುರಿಸುತ್ತೇವೆ. ಸತ್ಯಮೇವ ಜಯತೆ’ ಎಂದು ಹೇಳಿದರು. ನಾನು ಹಾಗೂ ನನ್ನ ತಮ್ಮ ಎನ್‌.ಎ.ಹ್ಯಾರಿಸ್‌ ಅವರ ಮಕ್ಕಳು. ನಾವು ಈ ಮನೆಯಲ್ಲಿದ್ದೇವೆ ಎಂಬ ಕಾರಣಕ್ಕೆ ಇ.ಡಿ.ಯವರು ಈ ಮನೆಗೆ ಬಂದಿದ್ದಾರೆ ಅಷ್ಟೇ ಹೊರತು ಹ್ಯಾರಿಸ್‌ ಅವರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

2021ರ ಪ್ರಕರಣದಲ್ಲಿ ಆರು ವರ್ಷಗಳ ಬಳಿಕ ನಮ್ಮ ಮನೆ ಮೇಲೆ ರೇಡ್ ಮಾಡಿದ್ದಾರೆ. ಇದೇ ರೀತಿ ಆಗುತ್ತಿದ್ದರೆ ನಮ್ಮ ತಂದೆಯವರು ನಮ್ಮನ್ನು ಮನೆಯಿಂದ ಹೊರಗೆ ಹಾಕುತ್ತಾರೆ ಎಂದು ಭಾವುಕರಾದರು. ಇ.ಡಿ. ದಾಳಿಯಲ್ಲಿ 37 ಲಕ್ಷ ರು. ಹಣ ಸಿಕ್ಕಿಲ್ಲ. ಕೇವಲ 2 ಮೊಬೈಲ್ ತೆಗೆದುಕೊಂಡು ಹೋಗಿದ್ದಾರೆ. ಒಂದೇ ಒಂದು ರುಪಾಯಿಯೂ ಸಿಕ್ಕಿಲ್ಲ. ಮಾಧ್ಯಮಗಳು ಈ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡುವುದು ಬೇಡ. ನೀವು ಈ ರೀತಿ ಮಾಡಿದರೆ ನಮ್ಮ ಮನೆಯಲ್ಲಿರುವ ವಯಸ್ಸಾದ ಅಜ್ಜ, ನಮ್ಮ ತಾಯಿಯವರ ಪರಿಸ್ಥಿತಿ ಏನಾಗಬೇಡ ಎಂದು ನಲಪಾಡ್ ಪ್ರಶ್ನಿಸಿದರು.


Asianet News 1 hour ago
Home Flash News