Select Location
All Locations
State
Region
City / District
'ಭಾರತದ ಜನತೆಗೆ ಗೊತ್ತಿದೆ ಭಯೋತ್ಪಾದಕರು ಯಾರು ಅನ್ನೋದು' ಪ್ರಧಾನಿ ಮೋದಿಗೆ ಟೆರರಿಸ್ಟ್ ಎಂದ ಖರ್ಗೆ ವಿರುದ್ಧ ಬಿಜೆಪಿ ಗರಂ,

'ಭಾರತದ ಜನತೆಗೆ ಗೊತ್ತಿದೆ ಭಯೋತ್ಪಾದಕರು ಯಾರು ಅನ್ನೋದು' ಪ್ರಧಾನಿ ಮೋದಿಗೆ ಟೆರರಿಸ್ಟ್ ಎಂದ ಖರ್ಗೆ ವಿರುದ್ಧ ಬಿಜೆಪಿ ಗರಂ,

ಬೆಂಗಳೂರು (ಏ.22): ಪ್ರಧಾನಿ ಮೋದಿ ಅವರನ್ನು ಕುರಿತು ‘ಭಯೋತ್ಪಾದಕ’ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದು, ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಖರ್ಗೆ ಅವರ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ಬಲವಾಗಿ ಖಂಡಿಸಿದ್ದಾರೆ.

ಖರ್ಗೆ ದುರಹಂಕಾರದ ಪರಮಾವಧಿ ಖರ್ಗೆ ಅವರೇ, ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ತೀರಾ ಕೀಳುಮಟ್ಟದಲ್ಲಿ ನೀವು ನೀಡಿರುವ ಹೇಳಿಕೆ ನಿಮ್ಮ ದುರಹಂಕಾರದ ಪರಮಾವಧಿ ಮಾತ್ರವಲ್ಲ ಅದು ನಿಮ್ಮ ಕೊಳಕು, ವಿಷಕಾರಿ ಮನಸ್ಥಿತಿ ಅನಾವರಣಗೊಳಿಸಿದೆ. ಹೆಮ್ಮೆಯ ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ಅಚಲ ವಿಶ್ವಾಸವಿಟ್ಟು ಭಾರತದ ಜನತೆ ಸತತ ಮೂರನೇ ಬಾರಿಗೆ ಅವರನ್ನು ಪ್ರಧಾನಿ ಪೀಠದಲ್ಲಿ ಕೂರಿಸಿದ್ದಾರೆ.. ಭಾರತೀಯರಿಗೆ ಯಾರು ಭಯೋತ್ಪಾದಕರು, ಯಾರು ದೇಶ ಭಕ್ತರು ಎಂಬುದು ತಿಳಿದಿದೆ. ಮೋದಿ ಅವರನ್ನು ಟೀಕಿಸುವ ಭರದಲ್ಲಿ ಹೀಗೆ ಅವಮಾನಿಸುವುದು ಎಂದರೆ ಮೋದಿ ಅವರನ್ನು ಬೆಂಬಲಿಸಿದ ಕೋಟ್ಯಂತರ ಭಾರತೀಯರನ್ನು ಅಪಮಾನಿಸಿದಂತೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಇಂತಹ ದುರ್ವರ್ತನೆ ಅಭ್ಯಾಸವಾಗಿಬಿಟ್ಟಿದೆ.

ಚುನಾವಣೆ ಬಂದಾಗಲೆಲ್ಲ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದು, ಜನ ನಿಮಗೆ ಪಾಠ ಕಲಿಸುತ್ತಲೇ ಬಂದಿದ್ದಾರೆ. ಆದರೂ ತಿದ್ದಿಕೊಳ್ಳದ ನಿಮ್ಮ ವರ್ತನೆ ನಿಮ್ಮ ಅಹಂಕಾರಕ್ಕೆ ಕನ್ನಡಿ ಹಿಡಿದಿದೆ. ಇಂತಹ ಕೀಳು ಮಟ್ಟದ ಅಸಂಬದ್ಧ ಹೇಳಿಕೆಗೆ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ. ಹಿರಿಯರಾಗಿ, ಹಲವಾರು ದಶಕಗಳ ಕಾಲ ರಾಜಕಾರಣದಲ್ಲಿದ್ದರೂ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರೂ, ನಿಮ್ಮ ನೇತೃತ್ವ ತೃಪ್ತಿಪಡಿಸಲು ನೀವು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ಜನ ಕೂಡ ನಿರೀಕ್ಷಿಸಿರಲಿಲ್ಲ. ನಿಮ್ಮ ಈ ಅವಹೇಳನಕಾರಿ ರಾಜಕೀಯಕ್ಕೆ ಮುಂಬರುವ ದಿನಗಳಲ್ಲಿ ನಾಡಿನ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಜಯೇಂದ್ರ ಅವರು ಪ್ರಕಟಣೆ ಮೂಲಕ ತಿರುಗೇಟು ನೀಡಿದ್ದಾರೆ.


Asianet News 2 hours ago
Home Flash News