IPL 2026: ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ - ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
ಹೈದರಾಬಾದ್: ರನ್ ಮಳೆಯೇ ಸುರಿದ ಮಂಗಳವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 47 ರನ್ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ 4ನೇ ಜಯ ಕಂಡ ಸನ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರೆ, ಡೆಲ್ಲಿ 3ನೇ ಸೋಲುಂಡಿತು. ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್, ಅಭಿಷೇಕ್ ಶರ್ಮಾ ಸ್ಫೋಟಕ ಶತಕದ ನೆರವಿನಿಂದ 2 ವಿಕೆಟ್‌ಗೆ 242 ರನ್ ಕಲೆಹಾಕಿತು. ಡೆಲ್ಲಿ ಹೋರಾಟದ ಹೊರತಾಗಿಯೂ 9 ವಿಕೆಟ್‌ಗೆ 195 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಸನ್‌ರೈಸರ್ಸ್ ಆರ್ಭಟ: ಆರಂಭದಲ್ಲಿ ಸನ್‌ರೈಸರ್ಸ್ ಅಕ್ಷರಶಃ ಅಬ್ಬರಿಸಿತು. ಅಭಿಷೇಕ್ ಇತರ ಮೂವರ ಜೊತೆಗೆ ತಲಾ 65+ ರನ್ ಜೊತೆಯಾಟವಾಡಿದರು. ಮೊದಲ ವಿಕೆಟ್‌ಗೆ ಟ್ರ್ಯಾವಿಡ್ ಹೆಡ್(35) ಜೊತೆ 97, 2ನೇ ವಿಕೆಟ್‌ಗೆ ಇಶಾನ್ (25) ಜೊತೆ 79 ಹಾಗೂ ಮುರಿಯದ 3ನೇ ವಿಕೆಟ್‌ಗೆ ಕ್ಲಾಸೆನ್(ಔಟಾಗದೆ 37) ಜೊತೆ 66 ರನ್ ಸೇರಿಸಿದರು. ಅಭಿಷೇಕ್ 68 ಎಸೆತಗಳಲ್ಲಿ 10 ಬೌಂಡರಿ, 10 ಸಿಕ್ಸರ್‌ನೊಂದಿಗೆ ಔಟಾಗದೆ 135 ರನ್ ಬಾರಿಸಿದರು.ಅಬ್ಬರಿಸಿ ಬೃಹತ್ ಮೊತ್ತ ಬೆನ್ನತ್ತಲು ಇಳಿದ ಡೆಲ್ಲಿ ಉತ್ತಮ ಆರಂಭ ಪಡೆದು, 9 ಓವರ್‌ಗಳಲ್ಲಿ 1 ವಿಕೆಟ್‌ಗೆ 98 ರನ್ ಸೇರಿಸಿತು.
ಆದರೆ ರಾಹುಲ್(37), ನಿತೀಶ್ ರಾಣಾ(57) ಔಟಾದ ಬಳಿಕ ತಂಡ ದಿಢೀರ್ ಕುಸಿಯಿತು. ಸಮೀರ್ ರಿಜ್ವಿ(41 ) ಕೆಲ ಹೊತ್ತು ಹೋರಾಡಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಸ್ಕೋರ್: ಸನ್‌ರೈಸರ್ಸ್ 242/2 (ಅಭಿಷೇಕ್ ಔಟಾಗದೆ 135, ಕ್ಲಾಸೆನ್ ಔಟಾಗದೆ 37, ಅಕ್ಷರ್ 1-23), ಡೆಲ್ಲಿ 195/9 (ನಿತೀಶ್ 57, ಸಮೀರ್ 41, ಮಾಲಿಂಗಾ 32/2) ಸನ್‌ರೈಸರ್ಸ್ ಈ ಬಾರಿ ಐಪಿಎಲ್‌ನ 7 ಪಂದ್ಯಗಳಲ್ಲೂ ಮೊದಲು ಬ್ಯಾಟ್ ಮಾಡಿದರೆ, ಡೆಲ್ಲಿಗೆ 7 ಪಂದ್ಯಗಳಲ್ಲೂ ಚೇಸಿಂಗ್ ಸಿಕ್ಕಿದೆ.