ಕದನ ವಿರಾಮಕ್ಕೆ ಪಾಕ್ ಮಧ್ಯಸ್ಥಿಕೆ, ಸಂಘಿಗಳೇ..ಹೇಗೆ ಜೀರ್ಣಿಸಿಕೊಳ್ಳುತ್ತೀರಿ: DMK
ಚೆನ್ನೈ: ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರುವ ಕುರಿತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ರಾಜ್ಯಸಭಾ ಸಂಸದೆ ರಾಜತಿ ಸಲ್ಮಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ್ದಾರೆ. ‘ಪಾಕಿಸ್ತಾನದ ಮಧ್ಯಸ್ಥಿಕೆಯಿಂದಾಗಿ ಅಮೆರಿಕ–ಇರಾನ್ ಯುದ್ಧ ಸ್ಥಗಿತಗೊಂಡಿದೆ. ಪಾಪದ ‘ವಿಶ್ವಗುರು’! ಸಂಘಿಗಳೇ... ಇದನ್ನು ನೀವು ಹೇಗೆ ಜೀರ್ಣಿಸಿಕೊಳ್ಳುತ್ತೀರಿ?’ ಎಂದು ಸಲ್ಮಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ದಾಳಿಯನ್ನು ಸ್ಥಗಿತಗೊಳಿಸಿ, ಎರಡು ವಾರಗಳ ದ್ವಿಪಕ್ಷೀಯ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಈ ಪ್ರತಿಕ್ರಿಯೆ ಬಂದಿದೆ. ಇರಾನ್ ಕೂಡ ಟ್ರಂಪ್ ಅವರ ಶಾಂತಿ ಪ್ರಸ್ತಾವನೆಯನ್ನು ಒಪ್ಪಿಕೊಂಡಿದ್ದು, ಹೊರ್ಮುಜ್ ಜಲಸಂಧಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಲು ಸಮ್ಮತಿಸಿದೆ.
‘ಇರಾನ್ ಮತ್ತು ಅಮೆರಿಕ ರಾಷ್ಟ್ರಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅತೀವ ವಿನಯದಿಂದ ಘೋಷಿಸುತ್ತೇನೆ. ಮಾತುಕತೆಗಾಗಿ ಏಪ್ರಿಲ್ 10ರಂದು ಇಸ್ಲಾಮಾಬಾದ್‌ಗೆ ಎರಡೂ ದೇಶಗಳ ನಿಯೋಗಗಳನ್ನು ಆಹ್ವಾನಿಸುತ್ತಿದ್ದೇನೆ’ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.