Hassan: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಅದಲು ಬದಲು: 6 ವಿದ್ಯಾರ್ಥಿಗಳಿಗೆ ಅನ್ಯಾಯ
ಹಾಸನ: ಸೋಮವಾರ ನಡೆದ ದ್ವಿತೀಯ ಪಿಯುಸಿ ಕಂಪ್ಯೂಟರ್ ಸೈನ್ಸ್ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ನಡೆದ ತಪ್ಪಿನಿಂದ ಆರು ವಿದ್ಯಾರ್ಥಿನಿಯರಿಗೆ ಅನ್ಯಾಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆ ಬೇಲೂರಿನ ಬಿಕ್ಕೋಡು ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೂಂ ನಂಬರ್ 6ರಲ್ಲಿ 6 ವಿದ್ಯಾರ್ಥಿನಿಯರಿಗೆ ಪ್ರಶ್ನೆಪತ್ರಿಕೆ ವಿತರಿಸುವ ಸಂಧ್ಯಾ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆಪತ್ರಿಕೆಯನ್ನು ನೀಡಿದ್ದಾರೆ. ಒಂದೇ ಕೊಠಡಿಯಲ್ಲಿ ರಿಪೀಟರ್ಸ್ ಮತ್ತು ಮೊದಲ ಬಾರಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿದ್ದರು.
ತಪ್ಪಾದ ಪ್ರಶ್ನೆಪತ್ರಿಕೆ
ಹಳೆಯ ಮತ್ತು ಹೊಸ ಪಠ್ಯಕ್ರಮಗಳಲ್ಲಿ ಕೆಲವು ಅಧ್ಯಾಯಗಳು ಒಂದೇ ರೀತಿಯಾಗಿದ್ದರಿಂದ ವಿದ್ಯಾರ್ಥಿನಿಯರು ಇದು ಕಷ್ಟವಾದ ಪ್ರಶ್ನೆಪತ್ರಿಕೆ ಇರಬಹುದು ಎಂದುಕೊಂಡು ಮೂರು ಗಂಟೆಗಳ ಕಾಲ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಮುಗಿದು ಹೊರ ಬಂದ ಬಳಿಕ ಇತರ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಯನ್ನು ಹೋಲಿಸಿ ನೋಡಿದಾಗ ಅವರು ಬರೆದಿದ್ದು ತಪ್ಪಾದ ಪ್ರಶ್ನೆಪತ್ರಿಕೆ ಎಂಬುದು ತಿಳಿದು ಬಂದಿದೆ.
ತಕ್ಷಣ ಪ್ರಾಂಶುಪಾಲರಿಗೆ ಮತ್ತು ಮೇಲ್ವಿಚಾರಕರಿಗೆ ವಿಷಯ ತಿಳಿಸಿದ್ದಾರೆ. ಪರೀಕ್ಷೆ ಸಮಯ ಮುಗಿದ ನಂತರ ಹೊಸ ಪ್ರಶ್ನೆಪತ್ರಿಕೆ ನೀಡಿ ಕೇವಲ ಅರ್ಧ ಗಂಟೆಯಲ್ಲಿ ಬರೆಯುವಂತೆ ಸೂಚಿಸಿ ವಿದ್ಯಾರ್ಥಿನಿಯರಿಗೆ ಆತಂಕ ಉಂಟು ಮಾಡಿದ್ದಾರೆ.