Select Location
All Locations
State
Region
City / District
ಗಾಜಾ ಶಾಂತಿ ಯೋಜನೆ: ಹಮಾಸ್‌ ನಾಯಕರೊಂದಿಗೆ ಟ್ರಂಪ್ ಅಳಿಯ ಕುಶ್ನರ್‌ ಮಾತುಕತೆ

ಗಾಜಾ ಶಾಂತಿ ಯೋಜನೆ: ಹಮಾಸ್‌ ನಾಯಕರೊಂದಿಗೆ ಟ್ರಂಪ್ ಅಳಿಯ ಕುಶ್ನರ್‌ ಮಾತುಕತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಳಿಯ ಹಾಗೂ ಆಪ್ತ ಸಲಹೆಗಾರ ಜರೇಡ್ ಕುಶ್ನರ್‌ ಭಾನುವಾರ ಈಜಿಪ್ಟ್‌ನಲ್ಲಿ ಹಮಾಸ್‌ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಗಾಜಾದ ಭವಿಷ್ಯಕ್ಕೆ ಸಂಬಂಧಿಸಿದ ಟ್ರಂಪ್‌ ಅವರ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುವ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿ ಈ ಸಭೆ ನಡೆದಿದೆ ಎಂದು ಹಮಾಸ್‌ನ ಇಬ್ಬರು ಅಧಿಕಾರಿಗಳು ಹಾಗೂ ಸಭೆಯ ಕುರಿತು ಮಾಹಿತಿ ಹೊಂದಿರುವ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಗಾಜಾ ಕುರಿತು ಮಾತುಕತೆಗಾಗಿ ಕುಶ್ನರ್‌ ಈಜಿಪ್ಟ್‌ಗೆ ತೆರಳಿರುವುದನ್ನು ಅಮೆರಿಕದ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಆದರೆ ಮಾತುಕತೆಯ ಕುರಿತು ಹೆಚ್ಚಿನ ವಿವರ ನೀಡಿಲ್ಲ. ಸಭೆಯ ಮಾಹಿತಿ ಬಹಿರಂಗಪಡಿಸಿದ ಅಧಿಕಾರಿಗಳು ಹೆಸರು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಮಾತನಾಡಿದ್ದಾರೆ.

ಗಾಜಾದಲ್ಲಿ ಹಮಾಸ್‌ ಅನ್ನು ನಿಶ್ಶಸ್ತ್ರಗೊಳಿಸುವ ಅಮೆರಿಕ ಬೆಂಬಲಿತ ಯೋಜನೆ ಇತ್ತೀಚೆಗೆ ಪ್ರಗತಿ ಕಾಣದೆ ಸ್ಥಗಿತಗೊಂಡಿರುವ ಸಂದರ್ಭದಲ್ಲೇ ಕುಶ್ನರ್‌ ಅವರ ಭೇಟಿ ನಡೆದಿದೆ. ಕಳೆದ ತಿಂಗಳು ಟ್ರಂಪ್‌ ಅವರ ‘ಬೋರ್ಡ್‌ ಆಫ್‌ ಪೀಸ್‌’ ಹಮಾಸ್‌ ಜತೆಗೆ ಒಪ್ಪಂದಕ್ಕೆ ಬಂದಿರುವುದಾಗಿ ಟ್ರಂಪ್‌ ಘೋಷಿಸಿದ್ದರು. ಹಮಾಸ್‌ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಮಾಡುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಆದರೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈ ಒಪ್ಪಂದವನ್ನು ತಿರಸ್ಕರಿಸಿರುವುದಾಗಿ ಹೇಳಿದ್ದು, ಇದರಿಂದ ಯೋಜನೆ ಮುಂದುವರಿಯುವುದು ಅನಿಶ್ಚಿತವಾಗಿದೆ. ಭಾನುವಾರದ ಹಮಾಸ್‌ ನಾಯಕರೊಂದಿಗಿನ ಮಾತುಕತೆ ಬಳಿಕ ಕುಶ್ನರ್‌ ಇಸ್ರೇಲ್‌ಗೆ ತೆರಳಿ ನೆತನ್ಯಾಹು ಅವರನ್ನು ಭೇಟಿಯಾಗಿ ಗಾಜಾ ಪರಿಸ್ಥಿತಿ ಕುರಿತು ಚರ್ಚಿಸುವ ನಿರೀಕ್ಷೆಯಿದೆ. ಹಮಾಸ್‌ ಅನ್ನು ಅಮೆರಿಕ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿದ್ದರೂ, ಟ್ರಂಪ್‌ ಆಡಳಿತದಲ್ಲಿ ಆ ಸಂಘಟನೆಯೊಂದಿಗೆ ನೇರ ಮಾತುಕತೆಗಳು ನಡೆದಿವೆ. ಇಸ್ರೇಲ್‌ನಲ್ಲಿ ಹಮಾಸ್‌ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದವರನ್ನು ಬಿಡುಗಡೆ ಮಾಡಿಸುವುದು ಮತ್ತು ಗಾಜಾದಲ್ಲಿ ಇಸ್ರೇಲ್‌ನ ಸೇನಾ ಕಾರ್ಯಾಚರಣೆಯನ್ನು ಅಂತ್ಯಗೊಳಿಸುವ ಉದ್ದೇಶದಿಂದ ಈ ಹಿಂದೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು.


Prajavani 7 days ago
Home Flash News