ಸೋನಿಯಾ ಗಾಂಧಿ ಅವರಿಂದ 'ವಂದೇ ಮಾತರಂ'ಗೆ ಅಪಮಾನ: ಸಿಎಂ ಸುವೇಂದು ಅಧಿಕಾರಿ ಗಂಭೀರ ಆರೋಪ!
ನವದೆಹಲಿ/ಕೋಲ್ಕತ್ತ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದ 'ವಂದೇ ಮಾತರಂ' ಗೀತೆ ಗಾಯನಕ್ಕೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಇದು ರಾಷ್ಟ್ರೀಯತೆ ಹಾಗೂ ಈ ಗೀತೆಯ ರಚನೆಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರಿಗೆ ಎಸಗಿದ ಗಂಭೀರ ಅಪಮಾನ ಎಂದು ಕಿಡಿಕಾರಿದ್ದಾರೆ ಮಾಧ್ಯಮಗಳೊಂದಿಗೆ ರವಿವಾರ ಮಾತನಾಡಿದ ಸಿಎಂ ಸುವೇಂದು ಅಧಿಕಾರಿ, "ಒಂದು ನಿರ್ದಿಷ್ಟ ಮತಬ್ಯಾಂಕ್ ಓಲೈಕೆಗಾಗಿ ಕಾಂಗ್ರೆಸ್ ಪಕ್ಷವು ಇಂತಹ ಹೀನ ರಾಜಕೀಯದಲ್ಲಿ ನಿರತವಾಗಿದೆ. ರಾಷ್ಟ್ರಗೀತೆಯನ್ನು ಗೌರವಿಸುವ ವಿಷಯದಲ್ಲಿ ಸೋನಿಯಾ ಗಾಂಧಿ ಅವರು ನಡೆದುಕೊಂಡ ರೀತಿ ಇಡೀ ದೇಶದ ಗಮನಕ್ಕೆ ಬಂದಿದ್ದು, ಕಾಂಗ್ರೆಸ್ ಪಕ್ಷವು ಈ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು" ಎಂದು ಆಗ್ರಹಿಸಿದರು. ಇಡೀ ಬಂಗಾಳ ರಾಜ್ಯವು ಈ ಘಟನೆಯಿಂದ ಆಕ್ರೋಶಗೊಂಡಿದೆ ಎಂದು ಅವರು ಪ್ರತಿಪಾದಿಸಿದರು.
ಬಿಜೆಪಿಯ ಈ ಆರೋಪಗಳನ್ನು ಬಲವಾಗಿ ತಳ್ಳಿಹಾಕಿರುವ ಕಾಂಗ್ರೆಸ್, 'ವಂದೇ ಮಾತರಂ' ಗೀತೆಯ ಗಾಯನವನ್ನು ತಡೆಯುವ ಯಾವುದೇ ಯತ್ನ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೀರ್ಘಕಾಲದಿಂದ ನಿಂತುಕೊಂಡಿದ್ದರಿಂದ ಅವರಿಗೆ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಮಾಡುವಂತೆ ಸೋನಿಯಾ ಗಾಂಧಿ ಕೇಳಿಕೊಳ್ಳುತ್ತಿದ್ದರು ಹೊರತು ಗೀತೆಗೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎಂದು ಕಾಂಗ್ರೆಸ್ ವಿವರಣೆ ನೀಡಿದೆ. ವಂದೇ ಮಾತರಂ ಗೌರವಕ್ಕೆ ಕಾನೂನು ತಿದ್ದುಪಡಿ ರಾಷ್ಟ್ರಗೀತೆ ಜನ ಗಣ ಮನ ಗೀತೆಗೆ ಇರುವ ಕಾನೂನಾತ್ಮಕ ರಕ್ಷಣೆಯನ್ನು ರಾಷ್ಟ್ರೀಯ ಗೀತೆ 'ವಂದೇ ಮಾತರಂ'ಗೂ ವಿಸ್ತರಿಸುವ 'ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ಕಾಯ್ದೆ, 2026' ಅನ್ನು ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಪ್ರಸ್ತುತ ಜಾರಿಯಲ್ಲಿರುವ ಈ ಕಾಯ್ದೆಯನ್ವಯ ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯ ಗೀತೆಯ ಗಾಯನಕ್ಕೆ ಅಡ್ಡಿಪಡಿಸುವುದು ಅಥವಾ ಅಪಮಾನಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿದೆ. ಈ ಕಾಯ್ದೆಯ ಉಲ್ಲೇಖ ನೀಡಿರುವ ಬಿಜೆಪಿ, ಸೋನಿಯಾ ಗಾಂಧಿ ಅವರ ನಡವಳಿಕೆಯನ್ನು ಖಂಡಿಸಿದೆ.