Select Location
All Locations
State
Region
City / District
‘ಮೂರ್ಖ ಟ್ರಂಪ್‌ನ ಉತ್ಸಾಹ ಕುಗ್ಗಿದೆ’: ಇರಾನ್ ಮಾಧ್ಯಮಗಳ ಲೇವಡಿ

‘ಮೂರ್ಖ ಟ್ರಂಪ್‌ನ ಉತ್ಸಾಹ ಕುಗ್ಗಿದೆ’: ಇರಾನ್ ಮಾಧ್ಯಮಗಳ ಲೇವಡಿ

ಟೆಹರಾನ್‌: ಇರಾನ್ ವಿರುದ್ಧದ ಮಿಲಿಟರಿ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ, ಇರಾನ್‌ನ ಸರ್ಕಾರಿ ಮಾಧ್ಯಮಗಳು ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ‘ಮೂರ್ಖ ಟ್ರಂಪ್‌ನ ಉತ್ಸಾಹ ಕುಗ್ಗಿದೆ’ ಎಂದು ಅಮೆರಿಕ ಅಧ್ಯಕ್ಷರ ವಿರುದ್ಧ ಇರಾನ್ ಮಾಧ್ಯಮಗಳು ವ್ಯಂಗ್ಯ ಮಾಡಿವೆ. ಇರಾನ್ ಮತ್ತು ಅಮೆರಿಕದ ಮಿತ್ರ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್ ಕೋರಿಕೆಯ ಮೇರೆಗೆ ಬೃಹತ್‌ ದಾಳಿ ತಡೆಹಿಡಿಯಲಾಗಿದೆ ಎಂದು ಟ್ರಂಪ್ ಹೇಳಿದ್ದರು. ಒಪ್ಪಂದ ತಿಳಿವಳಿಕೆಗೆ ಸಮ್ಮತಿ ದೊರಕಿದ್ದು, ಇದರಲ್ಲಿ ಹೊರ್ಮುಜ್ ಜಲಸಂಧಿ ಮುಕ್ತಗೊಳಿಸುವುದು ಹಾಗೂ ಇರಾನ್ ಅಣ್ವಸ್ತ್ರ ಕಾರ್ಯಕ್ರಮ ನಿಷ್ಕ್ರಿಯಗೊಳಿಸುವುದು ಸೇರಿದೆ ಎಂದು ಹೇಳಿದ್ದರು. ಆದರೆ ಟ್ರಂಪ್ ಹೇಳಿಕೆಯನ್ನು ಇರಾನ್ ಮಾಧ್ಯಮಗಳು ನಿರಾಕರಿಸಿವೆ. ‘ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಅಮೆರಿಕಕ್ಕೆ ನಾವು ಯಾವುದೇ ವಿನಂತಿ ಮಾಡಿಲ್ಲ. ಅಲ್ಲದೆ ಹೊರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಇರಾನ್ ತನ್ನ ನಿಲುವನ್ನು ಬದಲಿಸಿಲ್ಲ’ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಟ್ರಂಪ್ ಅವರ ಈ ನಡೆ ಅಮೆರಿಕಕ್ಕೆ ಎದುರಾದ ಹಿನ್ನಡೆಯಾಗಿದ್ದು, ‘ಮೂರ್ಖ ಟ್ರಂಪ್‌ನ ಉತ್ಸಾಹ ಕುಗ್ಗಿದೆ’ ಎಂದು ‘ಫಾರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್ ದಾಳಿ ನಿಲ್ಲಿಸುವಂತೆ ವಿನಂತಿಸಿದೆ ಎಂಬ ಟ್ರಂಪ್ ವಾದವನ್ನು ‘ಮೆಹ್ರ್’ ಸುದ್ದಿಸಂಸ್ಥೆ ತಿರಸ್ಕರಿಸಿದೆ. ಅಮೆರಿಕದಿಂದ ಎದುರಾಗುವ ಎಲ್ಲ ಸವಾಲುಗಳಿಗೆ ತಕ್ಕ ಉತ್ತರ ನೀಡಲು ಇರಾನ್ ಮಿಲಿಟರಿ ಪಡೆಗಳು ಸಜ್ಜಾಗಿವೆ ಎಂದು ಹೇಳಿದೆ.


Prajavani 21 days ago
Home Flash News