ಚಿಕಿತ್ಸೆ ನೀಡಿ ಏನಾದರೂ ಅನಾಹುತವಾದರೆ ಎಲ್ಲರನ್ನೂ ಹೊಣೆ ಮಾಡುವೆ: ಸೊನಮ್ ಪತ್ನಿ
ನವದೆಹಲಿ: ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ, ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೊ ಪ್ರತಿಕ್ರಿಯಿಸಿದ್ದಾರೆ.
‘ನನ್ನ ಒಪ್ಪಿಗೆಯಿಲ್ಲದೆ ವಾಂಗ್ಚೂಕ್ ಅವರಿಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ನೀಡಬಾರದು’ ಎಂದು ಹೇಳಿದ್ದಾರೆ. ‘ವಾಂಗ್ಚೂಕ್ ಅವರು ನಿನ್ನೆ (ಶುಕ್ರವಾರ) ಚೆನ್ನಾಗಿಯೇ ಇದ್ದರು. ಅವರನ್ನು ಆಸ್ಪತ್ರೆಗೆ ಕರೆತರುವ ಅಗತ್ಯವಿರಲಿಲ್ಲ. ಕಳೆದ 20 ದಿನಗಳಿಂದ ವಾಂಗ್ಚೂಕ್ ಅವರ ಆರೋಗ್ಯ ಮೇಲ್ವಿಚಾರಣೆ ಮಾಡುತ್ತಿರುವ ವೈದ್ಯರು, ಕುಟುಂಬ ಮತ್ತು ನನ್ನಿಂದ ಒಪ್ಪಿಗೆ ಪಡೆಯದೆ ಅವರಿಗೆ ಯಾವುದೇ ಔಷಧಿಯನ್ನು ನೀಡಬಾರದು’ ಎಂದು ಅವರು ತಿಳಿಸಿದ್ದಾರೆ. ಸಂವಿಧಾನದ 32ನೇ ವಿಧಿಯ ಅನ್ವಯ ಇದು ನನ್ನ ಹಕ್ಕಾಗಿದೆ. ಒಂದು ವೇಳೆ ವಾಂಗ್ಚೂಕ್ ಅವರಿಗೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಎಲ್ಲರನ್ನೂ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ಆಂಗ್ಮೋ ಎಚ್ಚರಿಕೆ ನೀಡಿದ್ದಾರೆ.
ವಾಂಗ್ಚೂಕ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ 21ನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಮುಂಜಾನೆ ಪೊಲೀಸರು ವಾಂಗ್ಚೂಕ್ ಅವರನ್ನು ಜಂತರ್ ಮಂತರ್‌ನಿಂದ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ದೆಹಲಿ ಹೈಕೋರ್ಟ್ ಆದೇಶದ ಅನುಸಾರ ವಾಂಗ್ಚೂಕ್ ಅವರನ್ನು ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ವಿಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದ ವಾಂಗ್ಚೂಕ್, ನನ್ನ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದರೂ ಮುಷ್ಕರ ಮುಂದುವರಿಸಲು ನಿರ್ಧರಿಸಿರುವುದಾಗಿ ಹೇಳಿದ್ದರು. ‘ಈರುಳ್ಳಿ ಬೆಲೆ ವಿಚಾರಕ್ಕೇ ಹಲವು ಸರ್ಕಾರಗಳು ಬಿದ್ದಿವೆ. ನನ್ನ ಉಪವಾಸದ ಅವಧಿಯಲ್ಲಿ ದೇಹದ ಶೇಕಡ 20ರಷ್ಟು ಭಾಗವನ್ನು ಕಳೆದುಕೊಂಡಿದ್ದೇನೆ. ಕೇಂದ್ರ ಸರ್ಕಾರವು ಯುವಕರ ಧ್ವನಿಗೆ ಕಿವಿಗೊಡುವ ಸಮಯ ಬಂದಿದೆ’ ಎಂದಿದ್ದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ), ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಬೆಂಬಲ ಸೂಚಿಸಿದ್ದ ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಜೂನ್ 28ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.