ಪುರಿ ರಥಯಾತ್ರೆಯ ರಹಸ್ಯ: ಪ್ರತಿವರ್ಷ ಹೊಸ ರಥಗಳನ್ನೇ ನಿರ್ಮಿಸುವುದೇಕೆ?
ಪ್ರತಿ ವರ್ಷ ಒಡಿಶಾದ ಪುರಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಶ್ರೀ ಜಗನ್ನಾಥ ರಥಯಾತ್ರೆಯನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಭಕ್ತ ಸಂದೋಹದ"ಜೈ ಜಗನ್ನಾಥ" ಘೋಷಣೆಗಳ ನಡುವೆ ಮೂರು ಬೃಹತ್ ಮರದ ರಥಗಳು ನಿಧಾನವಾಗಿ ಸಾಗುವ ದೃಶ್ಯ ಭಕ್ತರನ್ನು ಭಾವಾವೇಶಕ್ಕೆ ಒಳಗಾಗುವಂತೆ ಮಾಡುತ್ತದೆ. ಬಹುತೇಕರಿಗೆ ಇದು ಭಕ್ತಿಯ ಸಂಕೇತವಾಗಿದ್ದರೆ, ಈ ಬೃಹತ್ ರಥಗಳ ಹಿಂದೆ ಶತಮಾನಗಳಿಂದ ಅಚಲವಾಗಿ ಉಳಿದಿರುವ ಅಪರೂಪದ ಇಂಜಿನಿಯರಿಂಗ್ ಕೌಶಲ್ಯ, ಕರಕುಶಲತೆ, ಆಚರಣೆ ಹಾಗೂ ಸಂಪ್ರದಾಯದ ಅದ್ಭುತ ಕಥೆಯಿದೆ. ಸಾಮಾನ್ಯವಾಗಿ ವರ್ಷಗಳ ಕಾಲ ಸಂರಕ್ಷಿಸುವ ರಥಗಳಂತಲ್ಲ, ಶ್ರೀ ಜಗನ್ನಾಥನ ರಥಗಳನ್ನು ಪ್ರತಿವರ್ಷ ಹೊಸದಾಗಿ ನಿರ್ಮಿಸಲಾಗುತ್ತದೆ. ರಥಯಾತ್ರೆಗೆ ಹಲವು ತಿಂಗಳುಗಳ ಮುನ್ನವೇ ನಿರ್ಮಾಣ ಕಾರ್ಯ ಆರಂಭವಾಗುತ್ತದೆ. ತಲೆಮಾರಿನಿಂದ ತಲೆಮಾರಿಗೆ ಬಂದಿರುವ ನಿರ್ದಿಷ್ಟ ಅಳತೆಗಳು, ವಿಧಿವಿಧಾನಗಳು ಹಾಗೂ ಸಂಪ್ರದಾಯಗಳನ್ನು ಅನುಸರಿಸಿ ನೂರಾರು ವಂಶಪಾರಂಪರಿಕ ಶಿಲ್ಪಿಗಳು ಈ ಕಾರ್ಯದಲ್ಲಿ ತೊಡಗುತ್ತಾರೆ.
ಶತಮಾನಗಳ ಇತಿಹಾಸ ಹೊಂದಿರುವ ಸಂಪ್ರದಾಯ ಜಗನ್ನಾಥ ರಥಯಾತ್ರೆ ಭಾರತದ ಅತ್ಯಂತ ಪ್ರಾಚೀನ ಹಾಗೂ ನಿರಂತರವಾಗಿ ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಒಂದಾಗಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ ಈ ಉತ್ಸವ ಅನೇಕ ಶತಮಾನಗಳಿಂದ ನಡೆಯುತ್ತಿದ್ದು, ಇಂದಿನ ಜಗನ್ನಾಥ ದೇವಸ್ಥಾನವನ್ನು 12ನೇ ಶತಮಾನದಲ್ಲಿ ರಾಜ ಅನಂತವರ್ಮನ್ ಚೋಡಗಂಗ ದೇವನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಕಾಲಕ್ರಮೇಣ ಪ್ರತಿವರ್ಷ ಹೊಸ ರಥಗಳನ್ನು ನಿರ್ಮಿಸುವ ಪದ್ಧತಿ ರಥಯಾತ್ರೆಯ ಅವಿಭಾಜ್ಯ ಅಂಗವಾಗಿ ಬೆಳೆದುಬಂದಿತು. ಪ್ರತಿ ತಲೆಮಾರೂ ತಮ್ಮ ಪೂರ್ವಜರಿಂದ ಬಂದಿರುವ ತಂತ್ರಜ್ಞಾನ, ಆಚರಣೆ ಹಾಗೂ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಬಂದಿದೆ. ಶ್ರೀ ಜಗನ್ನಾಥ ದೇವಸ್ಥಾನ ಆಡಳಿತ (SJTA) ಪ್ರಕಾರ, ರಥ ನಿರ್ಮಾಣದ ಪ್ರತಿಯೊಂದು ಹಂತವೂ ದೇವಸ್ಥಾನದ ಶತಮಾನಗಳ ಸಂಪ್ರದಾಯ ಹಾಗೂ ನಿಗದಿತ ವಿಧಿವಿಧಾನಗಳ ಪ್ರಕಾರವೇ ನಡೆಯುತ್ತದೆ. ಪ್ರತಿವರ್ಷ ಹೊಸ ರಥಗಳನ್ನೇ ಏಕೆ ನಿರ್ಮಿಸಲಾಗುತ್ತದೆ? ಪುರಿಗೆ ಭೇಟಿ ನೀಡುವವರು ಹೆಚ್ಚಾಗಿ ಕೇಳುವ ಪ್ರಶ್ನೆಯಿದು.ಇದಕ್ಕೆ ಉತ್ತರ ದೇವಸ್ಥಾನದ ಸಂಪ್ರದಾಯದಲ್ಲಿಯೇ ಅಡಗಿದೆ.ಶಾಶ್ವತ ದೇವಾಲಯಗಳಂತೆ ಅಲ್ಲದೆ, ರಥಗಳು ನವೀಕರಣ ಹಾಗೂ ಪುನರುತ್ಥಾನದ ಸಂಕೇತವಾಗಿವೆ. ಪ್ರತಿವರ್ಷ ಶ್ರೀ ಜಗನ್ನಾಥ, ಶ್ರೀ ಬಲಭದ್ರ ಹಾಗೂ ದೇವಿ ಸುಭದ್ರೆಗಾಗಿ ಹೊಸ ಮರದಿಂದ ಸಂಪೂರ್ಣ ಹೊಸ ರಥಗಳನ್ನು ನಿರ್ಮಿಸಲಾಗುತ್ತದೆ. ರಥಯಾತ್ರೆ ಮುಗಿದ ಬಳಿಕ ಅವುಗಳನ್ನು ತೆರವುಗೊಳಿಸಲಾಗುತ್ತದೆ.ಪರಂಪರೆ ಶಾಶ್ವತವಾಗಿದ್ದರೂ, ಭೌತಿಕ ರೂಪಗಳು ತಾತ್ಕಾಲಿಕ ಎಂಬ ಹಿಂದೂ ಧಾರ್ಮಿಕ ನಂಬಿಕೆಯನ್ನು ಈ ಸಂಪ್ರದಾಯ ಪ್ರತಿಬಿಂಬಿಸುತ್ತದೆ.
ಮೂರು ರಥಗಳು... ಮೂರು ವಿಭಿನ್ನ ವೈಶಿಷ್ಟ್ಯಗಳು ಮೂರು ದೇವತೆಗಳಿಗೂ ಪ್ರತ್ಯೇಕ ವಿನ್ಯಾಸ, ಬಣ್ಣ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ರಥಗಳಿವೆ.ನಂದಿಘೋಷ– ಶ್ರೀ ಜಗನ್ನಾಥನ ರಥ. ಇದು ಮೂರರಲ್ಲಿ ಅತಿ ಎತ್ತರದ ರಥವಾಗಿದ್ದು, ಸಾಂಪ್ರದಾಯಿಕವಾಗಿ 16 ಚಕ್ರಗಳನ್ನು ಹೊಂದಿರುತ್ತದೆ.ತಾಳಧ್ವಜ – ಶ್ರೀ ಬಲಭದ್ರನ ರಥ. ಇದರಲ್ಲಿ 14 ಚಕ್ರಗಳಿದ್ದು, ಹಸಿರು ಹಾಗೂ ಕೆಂಪು ಬಣ್ಣದ ಹೊದಿಕೆ ವಿಶೇಷತೆ.ದರ್ಪದಲನ (ದೇವದಲನ) – ದೇವಿ ಸುಭದ್ರೆಯ ರಥ. ಇದು ಮೂರರಲ್ಲಿ ಚಿಕ್ಕದಾಗಿದ್ದು, 12 ಚಕ್ರಗಳನ್ನು ಹೊಂದಿರುತ್ತದೆ.ಪ್ರತಿಯೊಂದು ರಥವನ್ನೂ ಬಣ್ಣಬಣ್ಣದ ಬಟ್ಟೆಗಳು, ಮರದ ಕುದುರೆಗಳು, ರಕ್ಷಕ ಮೂರ್ತಿಗಳು ಹಾಗೂ ಪವಿತ್ರ ಚಿಹ್ನೆಗಳಿಂದ ಅಲಂಕರಿಸಲಾಗುತ್ತದೆ. ಅಕ್ಷಯ ತೃತೀಯದಿಂದ ಆರಂಭವಾಗುತ್ತದೆ ನಿರ್ಮಾಣ ಕಾರ್ಯ ರಥ ನಿರ್ಮಾಣ ಅಧಿಕೃತವಾಗಿ ಅಕ್ಷಯ ತೃತೀಯದಂದು ಆರಂಭವಾಗುತ್ತದೆ. ಹಿಂದೂ ಪಂಚಾಂಗದಲ್ಲಿ ಈ ದಿನ ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ.ನಿರ್ಮಾಣಕ್ಕೂ ಮುನ್ನ ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ನೆರವೇರಿಸಿ, ಶ್ರೀ ಜಗನ್ನಾಥನ ಅನುಮತಿಯ ಸಂಕೇತವಾದ 'ಆಜ್ಞಾ ಮಾಲೆ' (ಅಜ್ಞಾ ಮಾಲಾ) ಅರ್ಪಿಸುತ್ತಾರೆ.ಈ ವಿಧಿವಿಧಾನ ಪೂರ್ಣಗೊಂಡ ನಂತರವೇ ಶಿಲ್ಪಿಗಳು ಮರ ಕತ್ತರಿಸುವ ಹಾಗೂ ರಥ ನಿರ್ಮಿಸುವ ಕಾರ್ಯ ಆರಂಭಿಸುತ್ತಾರೆ.ಈ ಕಾರ್ಯವನ್ನು ಜಗನ್ನಾಥ ದೇವಸ್ಥಾನದ ಸಮೀಪದ 'ರಥಖಳಾ' ಎಂಬ ಸಾಂಪ್ರದಾಯಿಕ ನಿರ್ಮಾಣ ಸ್ಥಳದಲ್ಲಿ ನಡೆಸಲಾಗುತ್ತದೆ.