ಫಿಫಾ ವಿಶ್ವಕಪ್: ಕಣ್ಣೀರಿಟ್ಟ ರೊನಾಲ್ಡೊ, ನನಸಾಗದ ಟ್ರೋಫಿ ಕನಸು
ಡಲ್ಲಾಸ್: ಪೋರ್ಚುಗಲ್ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಕನಸು ಮತ್ತೊಮ್ಮೆ ಕಣ್ಣೀರಿನಲ್ಲಿ ಅಂತ್ಯಗೊಂಡಿದೆ.
2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ 1-0 ಗೋಲು ಅಂತರದ ಜಯ ಗಳಿಸಿರುವ ಸ್ಪೇನ್, ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಸ್ಪೇನ್ ತಂಡದ ಮೈಕೆಲ್ ಮೆರಿನೊ ಕೊನೆಯ ಕ್ಷಣದಲ್ಲಿ ಬಾರಿಸಿದ ಗೋಲು ಪೋರ್ಚುಗಲ್ ತಂಡಕ್ಕೆ ಆಘಾತ ನೀಡಿತು. ಇದರೊಂದಿಗೆ ಫುಟ್‌ಬಾಲ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರನೊಬ್ಬನ ವಿಶ್ವಕಪ್ ಅಭಿಯಾನಕ್ಕೆ ತೆರೆ ಬಿದ್ದಿದೆ. ಪಂದ್ಯದ ಕೊನೆಯ ಅವಧಿಯಲ್ಲಿ ಪೋರ್ಚುಗಲ್‌ಗೆ ಸಿಕ್ಕ ಫ್ರೀ ಕಿಕ್ ಅವಕಾಶ ಕೈತಪ್ಪಿದ ತಕ್ಷಣ, 41 ವರ್ಷದ ರೊನಾಲ್ಡೊ ಮೈದಾನದಲ್ಲೇ ಕಣ್ಣೀರು ಹಾಕಿದರು. ಅದ್ಭುತ ಕೌಶಲ್ಯದೊಂದಿಗೆ ಅನೇಕ ವೈಯಕ್ತಿಕ ದಾಖಲೆಗಳನ್ನು ಬರೆದಿದ್ದರೂ ರೊನಾಲ್ಡೊ ಪಾಲಿಗೆ ವಿಶ್ವಕಪ್ ಟ್ರೋಫಿ ಮಾತ್ರ ಕೈಗೆಟುಕಲಿಲ್ಲ.
2006 ರಿಂದ 2026ರವರೆಗಿನ ಪಯಣ:
ರೊನಾಲ್ಡೊ ಪದಾರ್ಪಣೆ ಮಾಡಿದ 2006 ರ ವಿಶ್ವಕಪ್‌ನಲ್ಲಿ ಪೋರ್ಚುಗಲ್ 4ನೇ ಸ್ಥಾನ ಪಡೆದಿತ್ತು. ನಂತರ 2010 ರಲ್ಲಿ ಪ್ರೀ-ಕ್ವಾರ್ಟರ್, 2014 ರಲ್ಲಿ ಗ್ರೂಪ್ ಹಂತದಲ್ಲೇ ಹೊರಬಿದ್ದಿತ್ತು. 2018 ರಲ್ಲಿ ಮತ್ತೊಮ್ಮೆ ಪ್ರೀ-ಕ್ವಾರ್ಟರ್‌ನಲ್ಲೇ ಅಭಿಯಾನ ಮುಗಿಸಿತ್ತು. 2022 ರಲ್ಲಿ ಕ್ವಾರ್ಟರ್‌ಫೈನಲ್ ತಲುಪಿತಾದರೂ, ರೊನಾಲ್ಡೊ ಅವರ ಬದ್ಧ ಎದುರಾಳಿ ಲಯೊನೆಲ್ ಮೆಸ್ಸಿ ಅರ್ಜೆಂಟೀನಾಗೆ ಟ್ರೋಫಿ ಗೆದ್ದುಕೊಟ್ಟು 'ಸಾರ್ವಕಾಲಿಕ ಶ್ರೇಷ್ಠ' ಎನಿಸಿಕೊಂಡಿದ್ದರು. ಈ ಬಾರಿ ಮಗದೊಮ್ಮೆ ಪ್ರಿ-ಕ್ವಾರ್ಟರ್‌ನಲ್ಲೇ ಹೊರಬಿದ್ದಿದೆ.
ವಿಶ್ವಕಪ್‌ನಲ್ಲಿ 11 ಗೋಲು
ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಆಟಗಳನ್ನು ಆಡಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ರೊನಾಲ್ಡೊ ಭಾಜನರಾಗಿದ್ದಾರೆ. 27 ಪಂದ್ಯಗಳಲ್ಲಿ 11 ಗೋಲುಗಳನ್ನು ಗಳಿಸಿದ್ದಾರೆ. ಕ್ಲಬ್ ಸಾಧನೆಗೆ ಹೋಲಿಸಿದರೆ ವಿಶ್ವಕಪ್‌ನಲ್ಲಿ ಈ ಸಾಧನೆ ಕೊಂಚ ಮಂಕಾಗಿದೆ. ಈ ಬಾರಿ ಐದು ಪಂದ್ಯಗಳಲ್ಲಿ ಮೂರು ಗೋಲುಗಳನ್ನಷ್ಟೇ ಗಳಿಸಿದ್ದಾರೆ. ಈ ಸಲ ಒಟ್ಟು 17 ಬಾರಿ ಗೋಲು ಬಾರಿಸಲು ಯತ್ನಿಸಿದರಾದರೂ, ಸಹ ಆಟಗಾರರಿಗೆ ಗೋಲು ಗಳಿಸುವ ಒಂದೇ ಒಂದು ಅವಕಾಶ ಸೃಷ್ಟಿಸಲಿಲ್ಲ.
ನಾಕೌಟ್ ಪಂದ್ಯದಲ್ಲಿ ಗೋಲು: 41 ವರ್ಷದ ರೊನಾಲ್ಡೊ, ನಾಕೌಟ್ ಪಂದ್ಯದಲ್ಲಿ ಗೋಲು ಗಳಿಸಿದ ಅತಿ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ರೌಂಡ್ 32ರ ಹಂತದಲ್ಲಿ ಕ್ರೊವೇಷಿಯಾ ವಿರುದ್ಧ ರೊನಾಲ್ಡೊ ಗೋಲು ಗಳಿಸಿದ್ದರು. ಉಜ್ಬೇಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಎರಡು ಅದ್ಭುತ ಗೋಲುಗಳನ್ನು ಗಳಿಸುವ ಮೂಲಕ ಪೋರ್ಚುಗಲ್ ಪರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಯುಸೆಬಿಯೊ (9 ಗೋಲು) ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದಿದ್ದರು.
6 ವಿಶ್ವಕಪ್‌ಗಳಲ್ಲಿ ಗೋಲು: ವಿಶ್ವಕಪ್ ಇತಿಹಾಸದಲ್ಲಿ ಸತತ 6 ವಿಭಿನ್ನ ವಿಶ್ವಕಪ್ ಟೂರ್ನಿಗಳಲ್ಲಿ (2006, 2010, 2014, 2018, 2022, 2026) ಗೋಲು ಗಳಿಸಿದ ವಿಶ್ವದ ಏಕೈಕ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ರೊನಾಲ್ಡೊ ಬರೆದಿದ್ದಾರೆ. 146 ಗೋಲು ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ರೊನಾಲ್ಡೊ, ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತ್ಯಧಿಕ ಗೋಲು ಗಳಿಸಿದ ದಾಖಲೆಯನ್ನು (146 ಗೋಲು) ಹೊಂದಿದ್ದಾರೆ. 232 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ 124 ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.