ಅಮೆರಿಕ-ಇರಾನ್ ಒಪ್ಪಂದಕ್ಕೆ ಟ್ರಂಪ್, ಪೆಜೆಶ್ಕಿಯಾನ್ ಡಿಜಿಟಲ್ ಸಹಿ: ಮ್ಯಾಕ್ರನ್ ಸಾಕ್ಷಿ
ಪ್ಯಾರಿಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಎರಡು ದೇಶಗಳ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ತಿಳವಳಿಕೆ ಒಪ್ಪಂದಕ್ಕೆ (MoU) ಔಪಚಾರಿಕವಾಗಿ ಸಹಿ ಹಾಕಿದ್ದಾರೆ, ಇದು ತಿಂಗಳುಗಳ ಕಾಲ ನಡೆದ ಯುದ್ಧದ ನಂತರ ಪ್ರಮುಖ ರಾಜತಾಂತ್ರಿಕ ಪ್ರಗತಿಯನ್ನು ಸೂಚಿಸಿದೆ. ಅಮೆರಿಕ ಮತ್ತು ಇರಾನ್ ಅಧಿಕಾರಿಗಳ ಪ್ರಕಾರ, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಇರಾನ್‌ನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಕರ್ ಖಲೀಬಾಫ್ ಅವರು ರವಿವಾರ ಎಲೆಕ್ಟ್ರಾನಿಕ್ ರೂಪದಲ್ಲಿ ಸಹಿ ಮಾಡಿದ ನಂತರ ಬುಧವಾರ ಇಬ್ಬರೂ ಅಧ್ಯಕ್ಷರು ಈ ದಾಖಲೆಯನ್ನು ಡಿಜಿಟಲ್ ರೂಪದಲ್ಲಿ ಕಾರ್ಯಗತಗೊಳಿಸಿದ್ದಾರೆ.
ಈ ವಾರದ ಕೊನೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯಬೇಕಿದ್ದ ಔಪಚಾರಿಕ ಸಹಿ ಸಮಾರಂಭದ ಯೋಜನೆ ಬದಲಾಯಿಸುವ ಮೂಲಕ ಒಪ್ಪಂದವು ತತ್ ಕ್ಷಣವೇ ಜಾರಿಗೆ ಬಂದಿತು. ವರ್ಸೈಲ್ಸ್ ಅರಮನೆಯಲ್ಲಿ ಬುಧವಾರ ರಾತ್ರಿ ನಡೆದ ಔತಣಕೂಟದ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ-ಇರಾನ್ ಒಪ್ಪಂದದ ಮುದ್ರಿತ ಪ್ರತಿಗೆ ಅಧಿಕೃತವಾಗಿ ಸಹಿ ಹಾಕಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಔತಣಕೂಟದ ಮೇಜಿನಲ್ಲೇ ಸಹಿ ಹಾಕುವ ವಿಡಿಯೋವನ್ನು ಶ್ವೇತಭವನ ಬಿಡುಗಡೆ ಮಾಡಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗಿನ ಔತಣದ ನಂತರ ಅರಮನೆಯಿಂದ ನಿರ್ಗಮಿಸುವಾಗ ವರ್ಸೈಲ್ಸ್‌ನಲ್ಲಿ ಇರಾನ್ ತಿಳವಳಿಕೆ ಪತ್ರಕ್ಕೆ ಸಹಿ ಹಾಕಿದ್ದೇನೆ ಎಂದು ಅಧ್ಯಕ್ಷ ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.