ವಿಧಾನಪರಿಷತ್ ಚುನಾವಣೆ: ‘ಕೈ’ ಶಾಸಕರು ಶೀಘ್ರ ರೆಸಾರ್ಟ್‌ಗೆ
ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಇದೇ 18ರಂದು ಚುನಾವಣೆ ನಡೆಯಲಿದ್ದು, ಅಡ್ಡ ಮತದಾನ ತಡೆಯಲು ಮುಂದಾಗಿರುವ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ಎರಡು ದಿನ ಮೊದಲೇ ರೆಸಾರ್ಟ್‌ಗೆ ಸ್ಥಳಾಂತರಿಸುತ್ತಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಸಮೀಪ ಇರುವ ವಂಡರ್‌ಲಾ ರೆಸಾರ್ಟ್‌ನಲ್ಲಿ ಇದೇ 16ರ ಸಂಜೆ 6ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಪಕ್ಷದ ಶಾಸಕರು ಹಾಗೂ ಬಾಹ್ಯ ಬೆಂಬಲಿತ ಶಾಸಕರು ಭಾಗವಹಿಸುವಂತೆ ಪಕ್ಷ ಸೂಚಿಸಿದೆ. ವಿಧಾನಸಭೆ ಸದಸ್ಯರಿಂದ ಪರಿಷತ್ತಿಗೆ ಆಯ್ಕೆಯಾಗಬೇಕಾದ ಒಟ್ಟು ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಬ್ಬ ಅಭ್ಯರ್ಥಿಯ ಗೆಲುವಿಗೆ ತಲಾ 28 ಮತಗಳು ಬೇಕಾಗುತ್ತದೆ. ಶಾಸಕರ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ನಾಲ್ಕು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಅನಾಯಾಸವಾಗಿ ಗೆಲ್ಲಲಿವೆ. ಉಳಿದ ಒಂದು ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಸ್ಪರ್ಧೆ ಇದ್ದು, ಅಭ್ಯರ್ಥಿಗಳು ಗೆಲ್ಲುವ ಮತಕ್ಕಾಗಿ ಅನ್ಯಮತಗಳ ಶಾಸಕರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಯುವ ಸಾಧ್ಯತೆ ಇದೆ. ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ರೆಸಾರ್ಟ್‌ಗೆ ಕರೆದೊಯ್ಯುತ್ತಿದೆ.