Select Location
All Locations
State
Region
City / District
ಅಮೆರಿಕ–ಇರಾನ್‌ ಶಾಂತಿ ಒಪ್ಪಂದದ ತುತ್ತ ತುದಿಯಲ್ಲಿವೆ: ಪಾಕ್‌ ಪ್ರಧಾನಿ ಷರೀಫ್

ಅಮೆರಿಕ–ಇರಾನ್‌ ಶಾಂತಿ ಒಪ್ಪಂದದ ತುತ್ತ ತುದಿಯಲ್ಲಿವೆ: ಪಾಕ್‌ ಪ್ರಧಾನಿ ಷರೀಫ್

ಇಸ್ಲಾಮಾಬಾದ್: ‘ಪಶ್ಚಿಮ ಏಷ್ಯಾದಲ್ಲಿ ಯುದ್ಧವನ್ನು ಕೊನೆಗಾಣಿಸುವ ಶಾಂತಿ ಒಪ್ಪಂದದ ಕರಡು ಪ್ರತಿಗೆ ಅಮೆರಿಕ ಮತ್ತು ಇರಾನ್ ಒಪ್ಪಿಗೆ ಸೂಚಿಸಿದ್ದು, ಅದಕ್ಕೆ ಅಂತಿಮ ರೂಪ ನೀಡಲು ಸಂಧಾನಕಾರರು ಎರಡು ಕಡೆಯವರೊಂದಿಗೆ ಕೆಲಸ ಮಾಡುತ್ತಿದ್ದಾರೆ’ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಶುಕ್ರವಾರ ತಿಳಿಸಿದ್ದಾರೆ.

ಈ ಬಗ್ಗೆ ‘ಎಕ್ಸ್‌’ ಪೋಸ್ಟ್‌ನಲ್ಲಿ ಮಾಹಿತಿ ನೀಡಿರುವ ಅವರು, ಉಭಯ ದೇಶಗಳ ನಡುವಿನ ಒಪ್ಪಂದ ಅಂತಿಮ ಘಟ್ಟ ತಲುಪಿದ್ದು, ಸಂಧಾನದ ಮುಂದಾಳತ್ವ ವಹಿಸಿರುವ ಪಾಕಿಸ್ತಾನವು ಮುಂದಿನ ಕ್ರಮಗಳ ಕುರಿತು ಕಾರ್ಯನಿರ್ವಹಿಸುತ್ತಿದೆ’ ಎಂದಿದ್ದಾರೆ. ‘ಎರಡೂ ದೇಶಗಳು ಶಾಂತಿ ಒಪ್ಪಂದದ ತುತ್ತ ತುದಿಯಲ್ಲಿವೆ’ ಎಂದೂ ಅವರು ತಿಳಿಸಿದ್ದಾರೆ. ಈ ವಾರ ಸತತ ಮೂರು ದಿನಗಳ ಕಾಲ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ಪರಸ್ಪರ ಗುಂಡಿನ ದಾಳಿ ನಡೆದ ನಂತರ ಮಾತುಕತೆಯಲ್ಲಿ ಈ ಪ್ರಗತಿ ಕಂಡುಬಂದಿದೆ. ಇದು ಪಶ್ಚಿಮ ಏಷ್ಯಾವನ್ನು ಮತ್ತೊಮ್ಮೆ ಪೂರ್ಣ ಪ್ರಮಾಣದ ಯುದ್ಧದ ಭೀತಿಗೆ ದೂಡುವಂತೆ ಮಾಡಿತ್ತು.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಶುಕ್ರವಾರ ತಮ್ಮ 'ಎಕ್ಸ್' ಪೋಸ್ಟ್‌ನಲ್ಲಿ, ‘ಒಪ್ಪಂದವು ಹಿಂದೆಂದಿಗಿಂತಲೂ ಅತ್ಯಂತ ಹತ್ತಿರದಲ್ಲಿದೆ’ ಎಂದು ಹೇಳಿದ್ದಾರೆ. ಅರಾಘ್ಚಿ ಅವರ ಪೋಸ್ಟ್‌ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಟ್ರುಥ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೆ.28ರಂದು ಆರಂಭವಾದ ಅಮೆರಿಕ–ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧವು, ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿತ್ತು. ಏ.7ರಂದು ಅಮೆರಿಕ ಮತ್ತು ಇರಾನ್‌ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ನಂತರ ದಿನಗಳಲ್ಲಿ ಅದು ಮುಂದುವರಿದಿದೆ. ಭಾನುವಾರ(ಜೂ.7) ಲೆಬನಾನ್‌ ಮೇಲಿನ ಇಸ್ರೇಲ್‌ ದಾಳಿಯನ್ನು ಖಂಡಿಸಿದ್ದ ಇರಾನ್‌, ಅಮೆರಿಕದೊಂದಿಗಿನ ಶಾಂತಿ ಒಪ್ಪಂದಗಳನ್ನು ಬದಿಗಿರಿಸಿ ಇಸ್ರೇಲ್‌ ಮೇಲೆ ಆಕ್ರಮಣಕಾರಿಯಾಗಿ ದಾಳಿ ನಡೆಸಿತ್ತು. 

ಇದಕ್ಕೆ ಇಸ್ರೇಲ್‌ ಕೂಡ ಪ್ರತಿದಾಳಿ ಮಾಡುವ ಮೂಲಕ ಪ್ರತಿಕ್ರಿಯಿಸಿತ್ತು. ಇದಾದ ನಂತರ ತನ್ನ ಹೆಲಿಕಾಪ್ಟರ್‌ ಅನ್ನು ಇರಾನ್‌ ಹೊಡೆದುರುಳಿಸಿದೆ ಎಂದು ಆರೋಪಿಸಿ, ಇರಾನ್‌ ಸೇನಾ ನೆಲೆಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ನೆರೆಯ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್‌ ದಾಳಿ ನಡೆಸಿತ್ತು. ಇದು ಪಶ್ಚಿಮ ಏಷ್ಯಾವನ್ನು ಮತ್ತೊಮ್ಮೆ ಯುದ್ಧದ ಭೀತಿಗೆ ತಳ್ಳಿತ್ತು. ಏತನ್ಮಧ್ಯೆ, ಶಾಂತಿ ಒಪ್ಪಂದದ ಕುರಿತು ಇರಾನ್‌ ಮುಂದಿಟ್ಟ ಪ್ರಸ್ತಾಪವನ್ನು ಟ್ರಂಪ್‌ ನಿರಾಕರಿಸಿದ್ದರು. ಇರಾನ್‌ ಬೇಡಿಕೆಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಇದು ಯುದ್ಧದ ಕುರಿತು ಆ ಪ್ರದೇಶದಲ್ಲಿ ಅನಿಶ್ಚಿತತೆ ಮುಂದುವರಿಯಲು ಕಾರಣವಾಗಿದೆ.


Prajavani 1 hour ago
Home Flash News