Select Location
All Locations
State
Region
City / District
ಕೃಷಿ ವಿವಿ ಕುಲಪತಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡುವಂತೆ ರಾಜ್ಯಪಾಲರಿಗೆ ಮನವಿ

ಕೃಷಿ ವಿವಿ ಕುಲಪತಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡುವಂತೆ ರಾಜ್ಯಪಾಲರಿಗೆ ಮನವಿ

ಬೆಂಗಳೂರು: ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪ, ಹಣದ ಪ್ರಭಾವ ಮತ್ತು ಪಕ್ಷಪಾತಕ್ಕೆ ಅವಕಾಶ ನೀಡಬಾರದು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳು ರಾಜ್ಯಪಾಲರು ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಿಗೆ ಮನವಿ ಮಾಡಿದ್ದಾರೆ.

ಕುಲಪತಿಗಳ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ಹಾಗೂ ಪ್ರಭಾವಮುಕ್ತವಾಗಿರಬೇಕು. ಶೋಧನಾ ಸಮಿತಿಯ ರಚನೆ ಹಾಗೂ ಕಾರ್ಯವೈಖರಿಯಲ್ಲಿ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತತೆ ಕಾಪಾಡುವ ಅಗತ್ಯವಿದೆ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ. ನಾಲ್ಕು ಪ್ರಮುಖ ಬೇಡಿಕೆಗಳು ಶೋಧ ಸಮಿತಿಯ ಸಂಪೂರ್ಣ ಸ್ವಾಯತ್ತತೆ – ಸಮಿತಿ ಸದಸ್ಯರು ಹಿತಾಸಕ್ತಿ ಸಂಘರ್ಷವಿಲ್ಲ ಎಂಬ ಘೋಷಣೆ ನೀಡಬೇಕು. ಸರ್ಕಾರದ ಪ್ರತಿನಿಧಿಯಾಗಿ ರಾಜ್ಯದ ಹೊರಗಿನ ಖ್ಯಾತ ಕೃಷಿ ವಿಜ್ಞಾನಿಯನ್ನು ನೇಮಿಸಬೇಕು.

ಹಣಕಾಸು ಹಿನ್ನೆಲೆಯ ಪರಿಶೀಲನೆ – ಆಯ್ಕೆ ಪಟ್ಟಿಗೆ ಸೇರುವ ಅಭ್ಯರ್ಥಿಗಳು, ಅವರ ಸಂಗಾತಿಗಳು ಮತ್ತು ಅವಲಂಬಿತರ ಬ್ಯಾಂಕ್ ವ್ಯವಹಾರಗಳು ಹಾಗೂ ಆಸ್ತಿ ವರ್ಗಾವಣೆಗಳನ್ನು ಪರಿಶೀಲಿಸಬೇಕು. ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಅಕ್ರಮ ಪ್ರಭಾವ ಅಥವಾ ಹಣದ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಲು ರಹಸ್ಯ ದೂರು ವ್ಯವಸ್ಥೆ ರೂಪಿಸಬೇಕು. ಹಣಕಾಸು ಬಹಿರಂಗಪಡಿಕೆ, ಹಿನ್ನೆಲೆ ಪರಿಶೀಲನೆ ಮತ್ತು ಅಕ್ರಮ ಪ್ರಭಾವ ಬೀರುವವರ ವಿರುದ್ಧ ಕಠಿಣ ಕ್ರಮಗಳನ್ನು ಕಡ್ಡಾಯಗೊಳಿಸುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು. ಶೈಕ್ಷಣಿಕ ಸಾಧನೆ, ಸಂಶೋಧನಾ ಪ್ರಕಟಣೆಗಳು ಮತ್ತು ರೈತಪರ ನವೋದ್ಯಮಗಳ ಆಧಾರದ ಮೇಲೆ ಅಂಕಗಳ ವ್ಯವಸ್ಥೆ ರೂಪಿಸಬೇಕು. 

ಆಯ್ಕೆಯಾದ ಬಳಿಕ ಸಮಿತಿಯ ಕಾರ್ಯವೈಖರಿ ಮತ್ತು ಶಿಫಾರಸುಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ. ಈಗಾಗಲೇ ಶಿವಮೊಗ್ಗ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯಗಳಿಗಾಗಿ ರಚಿಸಲಾದ ಶೋಧ ಸಮಿತಿಗಳನ್ನು ಮರುಪರಿಶೀಲಿಸಿ ಪುನರ್‌ರಚನೆ ಮಾಡುವಂತೆ ಕೋರಿದ್ದಾರೆ. ಕೃಷಿ ವಿಶ್ವವಿದ್ಯಾಲಯಗಳ ನಾಯಕತ್ವವು ರಾಜ್ಯದ ಆಹಾರ ಭದ್ರತೆ, ಗ್ರಾಮೀಣ ಜೀವನೋಪಾಯ ಮತ್ತು ಕೃಷಿ ವಿಜ್ಞಾನದ ಭವಿಷ್ಯಕ್ಕೆ ಸಂಬಂಧಿಸಿದ್ದರಿಂದ ಆಯ್ಕೆ ಪ್ರಕ್ರಿಯೆ ವಿಶ್ವಾಸಾರ್ಹ ಹಾಗೂ ಪಾರದರ್ಶಕವಾಗಿರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


Prajavani 1 hour ago
Home Flash News