ಆರ್ಥಿಕ ಬಿರುಗಾಳಿ ಅಪ್ಪಳಿಸಲಿದೆ ಎಂದು ಎಚ್ಚರಿಸಿದ್ದೆ: ಇಂಧನ ದರ ಏರಿಕೆಗೆ ರಾಹುಲ್
ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. 'ಹಣದುಬ್ಬರದ ವ್ಯಕ್ತಿ' ಮೋದಿ ಮತ್ತೆ ದಾಳಿ ನಡೆಸಿದ್ದಾರೆ. ದೇಶದಲ್ಲಿ ಆರ್ಥಿಕ ಬಿರುಗಾಳಿ ಅಪ್ಪಳಿಸಲಿದೆ ಎಂದು ಎಚ್ಚರಿಸಿದ್ದೆ ಎಂದು ರಾಹುಲ್ ಹೇಳಿದ್ದಾರೆ. 'ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಲಾಗುತ್ತಿದೆ. ಆ ಮೂಲಕ ಸದ್ದಿಲ್ಲದೆ ಜೇಬು ಲೂಟಿ ಮಾಡಲಾಗುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ. 'ಆರ್ಥಿಕ ಬಿರುಗಾಳಿ ಬರಲಿದೆ ಎಂದು ನಾನು ಬಹಳ ಸಮಯದಿಂದ ಎಚ್ಚರಿಸುತ್ತಿದ್ದೇನೆ. ಆದರೆ ಎಂದಿನಂತೆ ಮೋದಿ ಚುನಾವಣೆಗಳಲ್ಲಿ ತಲ್ಲೀನರಾಗಿದ್ದರು. ಈಗ ಚುನಾವಣೆ ಮುಗಿಯುತ್ತಲೇ ಇಂಧನ ಬೆಲೆ ₹8 ಹೆಚ್ಚಿಸಲಾಯಿತು' ಎಂದು ಹೇಳಿದ್ದಾರೆ.
'ಇಂಧನ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಚುನಾವಣೆಗಳಲ್ಲಿ ಭರವಸೆ ನೀಡುವುದು. ನಂತರ ಜನರ ಜೇಬಿಗೆ ಕತ್ತರಿ ಪ್ರಯೋಗಿಸುವುದು - ಇದುವೇ 'ಹಣದುಬ್ಬರದ ವ್ಯಕ್ತಿ' ಮೋದಿಯ ಕೆಲಸ' ಎಂದು ದೂರಿದ್ದಾರೆ. ಮತ್ತೊಂದೆಡೆ ಮೋದಿ ಸರ್ಕಾರದಿಂದ ದೈನಂದಿನ ಲೂಟಿ ಇನ್ನೂ ಮುಗಿದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. '2004ರಿಂದ 2014ರ ಯುಪಿಎ ಅವಧಿಯಲ್ಲಿ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಶೇ 175.34ರಷ್ಟು ಹೆಚ್ಚಾಗಿದೆ. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಒಂದು ಪೈಸೆಯೂ ಏರಿಕೆಯಾಗಿಲ್ಲ' ಎಂದು ಉಲ್ಲೇಖಿಸಿದ್ದಾರೆ. 'ಮೋದಿ ಸರ್ಕಾರ ಪೆಟ್ರೋಲ್ ಬೆಲೆಯನ್ನು 2014ರಲ್ಲಿ ಲೀಟರ್‌ಗೆ ₹71.41ರಿಂದ 2026ರಲ್ಲಿ ₹102.12ಕ್ಕೆ ಹೆಚ್ಚಿಸಿದೆ. ಆ ಮೂಲಕ ಶೇ 43.01ರಷ್ಟು ಏರಿಕೆಯಾಗಿದೆ. ಡಿಸೇಲ್ ಬೆಲೆ ₹56.71ರಿಂದ ₹95.20ಕ್ಕೆ ಹೆಚ್ಚಿಸಲಾಗಿದ್ದು, ಶೇ 67.87ರಷ್ಟು ಏರಿಕೆಯಾಗಿದೆ' ಎಂದಿದ್ದಾರೆ. 'ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರ ₹43 ಲಕ್ಷ ಕೋಟಿ ಲೂಟಿ ಮಾಡಿದೆ. ಅಂದರೆ ದೈನಂದಿನ ₹1000 ಲೂಟಿಯಾಗಿದೆ' ಎಂದು ಹೇಳಿದ್ದಾರೆ.