CSK ಸೋಲಿನೊಂದಿಗೆ ಪ್ಲೇ ಆಫ್ ತಲುಪಿದ ಮೂರು ತಂಡಗಳು: 1 ಸ್ಥಾನಕ್ಕೆ ಭಾರೀ ಪೈಪೋಟಿ
ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಿನ್ನೆ (ಮೇ 18) ನಡೆದ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತ ಬಳಿಕ ಎರಡು ತಂಡಗಳಿಗೆ ಪ್ಲೇ ಆಫ್ ತಲುಪಲು ಅವಕಾಶ ಮಾಡಿಕೊಟ್ಟಿತು. ಇದಕ್ಕೂ ಮೊದಲು ಪಂಜಾಬ್ ವಿರುದ್ಧ ಗೆದ್ದು ಆರ್‌ಸಿಬಿ ಪ್ಲೇ ಆಫ್ ಖಚಿತಪಡಿಸಿಕೊಂಡಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ತಂಡವು ಎಸ್‌ಆರ್‌ಎಚ್ ಗೆಲುವಿಗೆ 181 ರನ್‌ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಇನ್ನೂ ಒಂದು ಓವರ್ ಬಾಕಿ ಇರುವಂತೆ ತಲುಪಿದ ಎಸ್‌ಆರ್‌ಎಚ್ ಲೀಗ್‌ನಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಪ್ಲೇ ಆಫ್ ತಲುಪಿತು. ಇದರ ಜೊತೆಗೆ 16 ಅಂಕ ಹೊಂದಿರುವ ಗುಜರಾತ್ ಟೈಟನ್ಸ್ ತಂಡವನ್ನೂ ಪ್ಲೇ ಆಫ್‌ಗೆ ಕರೆದುಕೊಂಡು ಹೋಗಿದೆ. ಮೂರು ಪಂದ್ಯಗಳು ಪ್ಲೇ ಆಫ್‌ಗೆ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ತಂಡವಾಗಿ ಪ್ಲೇ ಆಫ್ ತಲುಪಿದರೆ, ತಲಾ 16 ಪಾಯಿಂಟ್ಸ್‌ಗಳನ್ನು ಹೊಂದಿರುವ ಎಸ್‌ಆರ್‌ಎಚ್ ಹಾಗೂ ಗುಜರಾತ್ ಟೈಟನ್ಸ್ ಕೂಡ ಪ್ಲೇ ಆಫ್ ತಲುಪಿವೆ.
ಬಾಕಿ ಉಳಿದಿರುವ ಒಂದು ಸ್ಥಾನಕ್ಕಾಗಿ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತ್ತ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪೈಪೋಟಿ ನಡೆಸಬೇಕಿದೆ. ರಾಜಸ್ಥಾನ ರಾಯಲ್ಸ್ ಬಾಕಿ ಇರುವ ಸ್ಥಾನಕ್ಕೇರಲು ಹೆಚ್ಚು ಅವಕಾಶ ಇರುವುದು ರಾಜಸ್ಥಾನ ತಂಡಕ್ಕೆ. ಆರ್‌ಆರ್ ತಂಡಕ್ಕೆ ಲೀಗ್‌ನಲ್ಲಿ ಎರಡು ಪಂದ್ಯಗಳು ಬಾಕಿ ಇವೆ. ಅವುಗಳನ್ನು ಗೆದ್ದರೆ, ಸುಲಭವಾಗಿ ಪ್ಲೇ ಆಫ್‌ಗೆ ತಲುಪಲಿದೆ. ಒಂದು ಪಂದ್ಯ ಸೋತು ಒಂದು ಗೆದ್ದರೆ, ಪಂಜಾಬ್ ಹಾಗೂ ಕೆಕೆಆರ್ ತಂಡಗಳ ಸೋಲು ಗೆಲುವು ಈ ತಂಡದ ಪ್ಲೇ ಆಫ್ ಅನ್ನು ನಿರ್ಧರಿಸುತ್ತದೆ. ಒಂದುವೇಳೆ, ಈ ತಂಡವು ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದರೆ, ಪ್ಲೇ ಆಫ್ ಓಟದಿಂದ ಹೊರಬೀಳಲಿದೆ. ಪಂಜಾಬ್ ಕಿಂಗ್ಸ್ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದ ಪಂಜಾಬ್, ಕೊನೆಯ 6 ಪಂದ್ಯಗಳಲ್ಲಿ ಆರನ್ನೂ ಸೋಲುವ ಮೂಲಕ ನಿರಾಸೆ ಅನುಭವಿಸಿದೆ. ಸದ್ಯ, ಬಾಕಿ ಉಳಿದಿರುವ ಒಂದು ಪಂದ್ಯ ಗೆಲ್ಲುವುದರ ಜೊತೆಗೆ ರಾಜಸ್ಥಾನ ರಾಯಲ್ಸ್ ಎರಡು ಪಂದ್ಯಗಳಲ್ಲಿ ಒಂದನ್ನು ಸೋತರೆ, ಪಂಜಾಬ್ ಪ್ಲೇ ಆಫ್ ತಲುಪಲಿದೆ. ಒಂದುವೇಳೆ, ಬಾಕಿ ಇರುವ ಒಂದು ಪಂದ್ಯವನ್ನು ಪಂಜಾಬ್ ಸೋತರೆ ಟೂರ್ನಿಯಿಂದ ಹೊರಬೀಳಲಿದೆ.
ಕೋಲ್ಕತ್ತ ನೈಟ್ ರೈಡರ್ಸ್ ಟೂರ್ನಿಯಲ್ಲಿ ಕಳಪೆ ಆರಂಭ ಪಡೆದಿದ್ದ ಕೆಕೆಆರ್ ಸದ್ಯ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೂ, ಈ ತಂಡ ಪ್ಲೇ ಆಫ್ ತಲುಪಬೇಕೆಂದರೆ, ಬಾಕಿ ಇರುವ ಎರಡು ಪಂದ್ಯಗಳಲ್ಲಿ ಎರಡನ್ನೂ ಉತ್ತಮ ರನ್‌ರೇಟ್‌ನಿಂದ ಗೆಲ್ಲುವುದರ ಜೊತೆಗೆ, ರಾಜಸ್ಥಾನ ಕನಿಷ್ಠ ಒಂದು ಪಂದ್ಯವನ್ನು ಸೋಲಬೇಕಿದೆ. ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ತಲುಪಲು ಇದ್ದ ಉತ್ತಮ ಅವಕಾಶ ತಪ್ಪಿಸಿಕೊಂಡಿರುವ ಚೆನ್ನೈ ತಂಡವು ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತ. ಅದಾಗ್ಯೂ ಈ ತಂಡ ಪ್ಲೇ ಆಫ್ ತಲುಪಬೇಕೆಂದರೆ, ತಮಗೆ ಬಾಕಿ ಇರುವ ಒಂದು ಪಂದ್ಯದಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲ್ಲಬೇಕು ಹಾಗೂ ರಾಜಸ್ಥಾನ ಎರಡು ಪಂದ್ಯಗಳನ್ನು, ಕೆಕೆಆರ್ ಮತ್ತು ಪಂಜಾಬ್ ತಂಡಗಳು ಒಂದೊಂದು ಪಂದ್ಯಗಳನ್ನು ಸೋತಾಗ ಚೆನ್ನೈ ಪ್ಲೇ ಆಫ್ ತಲುಪಬಹುದು. ಡೆಲ್ಲಿ ಕ್ಯಾಪಿಟಲ್ಸ್ ಬಹುತೇಕ ಟೂರ್ನಿಯಿಂದ ಹೊರಬಿದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌ನ ಪ್ಲೇ ಆಫ್ ಅನ್ನು ಇತರೆ ತಂಡಗಳ ಸೋಲು ಗೆಲುವು ನಿರ್ಧರಿಸಲಿದೆ. ವಿಶೇಷವಾಗಿ ರಾಜಸ್ಥಾನ ರಾಯಲ್ಸ್ ಎರಡು ಪಂದ್ಯಗಳಲ್ಲಿ ಸೋಲಬೇಕು, ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ಬಾಕಿ ಇರುವ ಪಂದ್ಯಗಳನ್ನು ಸೋಲಬೇಕು. ಆಗ ಡೆಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಕೊನೆಯ ಪಂದ್ಯದಲ್ಲಿ ಗೆದ್ದರೆ, ಪ್ಲೇ ಆಫ್ ತಲುಪುವ ಅವಕಾಶ ಇದೆ.