ಛಿದ್ರವಾದ ʼಕೆಂಪುʼಕೋಟೆ..: ಇದೇ ಮೊದಲ ಬಾರಿಗೆ ದೇಶದ ಎಲ್ಲೂ ಎಡಪಕ್ಷಕ್ಕೆ ಇಲ್ಲ ಅಧಿಕಾರ!
ಸುಮಾರು 30 ವರ್ಷಗಳ ಹಿಂದೆ ಅಂದರೆ, 1996ರಲ್ಲಿ ಸುಮಾರು 20 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಸಿಪಿ(ಎಂ) ನಾಯಕ ಜ್ಯೋತಿ ಬಸು ಅವರಿಗೆ ಯುನೈಟೆಡ್ ಫ್ರಂಟ್ ಮೂಲಕ ದೇಶದ ಪ್ರಧಾನ ಮಂತ್ರಿಯಾಗುವ ಭಾಗ್ಯ ಒಲಿದು ಬಂದಿತ್ತು. ಬಸು ಅವರು ಕೂಡಾ ದೊಡ್ಡ ಹುದ್ದೆ ಸ್ವೀಕರಿಸಲು ಒಪ್ಪಿಕೊಂಡಿದ್ದರು. ಆದರೆ ಅಂದು ಪೊಲಿಟ್ ಬ್ಯೂರೋದಲ್ಲಿ ಈ ನಿರ್ಧಾರದವನ್ನು ತಿರಸ್ಕರಿಸಲಾಗಿತ್ತು. ದೇಶದ ರಾಜಕೀಯದಲ್ಲಿ ಈ ನಿರ್ಧಾರವನ್ನು “ಐತಿಹಾಸಿಕ ಪ್ರಮಾದ” ಎಂದೇ ಪರಿಗಣಿಸಲಾಗುತ್ತದೆ. ಇದಾಗಿ 12 ವರ್ಷದ ಬಳಿಕ ಅಂದರೆ 2008ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಭಾಗವಾಗಿದ್ದ ಎಡರಂಗವು ಅಂದಿನ ಇಂಡೋ-ಯುಸ್ ಅಣು ಒಪ್ಪಂದವನ್ನು ವಿರೋಧಿಸಿ ಹೊರಬಂತು.
60 ಸಂಸದರು ಹೊರಬಂದ ಬಳಿಕ ಅಂದು ಸಿಂಗ್ ಸರ್ಕಾರ ಬಹುಮತ ಸಾಬೀತು ಮಾಡಬೇಕಾಗಿತ್ತು. ಆ ಸಮಯದಲ್ಲಿ ದೇಶದಲ್ಲಿ ಮೂರು ರಾಜ್ಯಗಳಲ್ಲಿ ಎಡ ಪಕ್ಷದ ಸರ್ಕಾರಗಳಿದ್ದವು. ಅವೆಂದರೆ, ಪಶ್ವಿಮ ಬಂಗಾಳ, ಕೇರಳ ಮತ್ತು ತ್ರಿಪುರ. ಇದಾಗ 10 ವರ್ಷದ ಬಳಿಕ ಅಂದರೆ 2026ರಲ್ಲಿ ಎಡರಂಗ ದೇಶದಲ್ಲಿ ಎಲ್ಲೂ ಅಧಿಕಾರದಲ್ಲಿಲ್ಲ. ಉಳಿಸಿಕೊಂಡಿದ್ದ ಒಂದೇ ಒಂದು ರಾಜ್ಯವಾದ ಕೇರಳದಲ್ಲಿಯೂ ಇದೀಗ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬಹುಮತ ಪಡೆದಿದ್ದು, ಕಮ್ಯುನಿಸ್ಟ್ ಪಕ್ಷವು ಅಧಿಕಾರ ಶೂನ್ಯವಾಗಿದೆ. ಗಮನಾರ್ಹ ಸಂಗತಿ ಏನೆಂದರೆ, 1970 ರ ನಂತರ ಭಾರತದ ಯಾವುದೇ ರಾಜ್ಯದಲ್ಲಿ ಕಮ್ಯುನಿಸ್ಟರು ಅಧಿಕಾರದಲ್ಲಿ ಇಲ್ಲದಿರುವುದು ಇದೇ ಮೊದಲು.
ಬೆಳೆದಿದ್ದು ಹೇಗೆ? 1951-52ರಲ್ಲಿ ದೇಶದಲ್ಲಿ ಮೊದಲ ಚುನಾವಣೆ ನಡೆದಾಗ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಲೋಕಸಭೆಯಲ್ಲಿ ವಿಪಕ್ಷಗಳಲ್ಲಿ ಅತಿ ದೊಡ್ಡ ಪಕ್ಷವಾಗಿ ಮೂಡಿಬಂದಿತ್ತು. ಐದು ವರ್ಷದ ಬಳಿಕ ಅಂದರೆ 1957ರಲ್ಲಿ ಭಾರತದ ಎಡಪಕ್ಷಗಳು ಕೇರಳದಲ್ಲಿ ಚುನಾವಣೆಗಳನ್ನು ಗೆಲ್ಲುವ ಮೂಲಕ ಮತ್ತು ಯಾವುದೇ ಪ್ರಮುಖ ರಾಷ್ಟ್ರದಲ್ಲಿ ವಿಶ್ವದ ಮೊದಲ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಕಮ್ಯುನಿಸ್ಟ್ ಸರ್ಕಾರವನ್ನು ರಚಿಸುವ ಮೂಲಕ ಇತಿಹಾಸ ನಿರ್ಮಿಸಿದವು. 1977ರಲ್ಲಿ ಸಿಪಿಐ (ಎಂ) ಪ.ಬಂಗಾಳದಲ್ಲಿ ಗೆದ್ದು ಅಧಿಕಾರ ಹಿಡಿಯಿತು. ಬಳಿಕ 23 ವರ್ಷಗಳ ಕಾಲ ಜ್ಯೋತಿ ಬಸು ಅವರು ಮುಖ್ಯಮಂತ್ರಿಯಾಗಿದ್ದರು. 2000 ನೇ ಇಸವಿಯಲ್ಲಿ ಇದೇ ಪಕ್ಷದಿಂದ ಬುದ್ಧದೇವ್ ಬಟ್ಟಾಚಾರ್ಯ ಸಿಎಂ ಆದರು. ಬಳಿಕ 11 ವರ್ಷಗಳ ಕಾಲ ಎಡರಂಗವು ಪ.ಬಂಗಾಳದಲ್ಲಿ ಅಧಿಕಾರ ನಡೆಸಿತ್ತು.