ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: ನೋಟಾ ಆಯ್ಕೆಗೆ ಮತದಾರರ ನಿರಾಸಕ್ತಿ!
ನವದೆಹಲಿ: ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದಿದ್ದು, ಮತದಾರರು 'ಯಾರಿಗೂ ಮತವಿಲ್ಲ' (None of the Above - NOTA) ಎಂಬ ಆಯ್ಕೆಯ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಲ್ಲ ಎಂಬುದು ಚುನಾವಣಾ ಆಯೋಗದ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಅಸ್ಸಾಂ ಹೊರತುಪಡಿಸಿ, ಉಳಿದ ಯಾವುದೇ ರಾಜ್ಯಗಳಲ್ಲಿ 'ನೋಟಾ' ಮತಗಳ ಪ್ರಮಾಣ ಶೇಕಡಾ ಒಂದರ ಗಡಿಯನ್ನು ದಾಟಿಲ್ಲ. ರಾಜ್ಯವಾರು ವಿವರ ಇಲ್ಲಿದೆ ಐದು ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಅತಿ ಹೆಚ್ಚು ಅಂದರೆ ಶೇ. 1.29 ರಷ್ಟು ಮತದಾರರು ನೋಟಾ ಬಟನ್ ಒತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಶೇ. 0.81, ಪುದುಚೇರಿಯಲ್ಲಿ ಶೇ. 0.73, ಕೇರಳದಲ್ಲಿ ಶೇ. 0.58 ಮತ್ತು ತಮಿಳುನಾಡಿನಲ್ಲಿ ಅತ್ಯಂತ ಕಡಿಮೆ ಅಂದರೆ ಕೇವಲ ಶೇ. 0.41 ರಷ್ಟು ನೋಟಾ ಮತಗಳು ದಾಖಲಾಗಿವೆ.
ನೋಟಾ ಮತಗಳ ಇಳಿಕೆ: 2013ರಲ್ಲಿ ನೋಟಾ ಆಯ್ಕೆಯನ್ನು ಜಾರಿಗೆ ತಂದ ನಂತರ, 2024ರ ಲೋಕಸಭಾ ಚುನಾವಣೆಯಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಪ್ರಮಾಣದ ಮತಗಳು ದಾಖಲಾಗಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇ. 1.08 ರಷ್ಟಿದ್ದ ನೋಟಾ ಮತಗಳ ಪ್ರಮಾಣ, 2024ರ ವೇಳೆಗೆ ಶೇ. 0.99 ಕ್ಕೆ ಇಳಿಕೆಯಾಗಿದೆ ಎಂದು ಚುನಾವಣಾ ಆಯೋಗದ 'ಅಟ್ಲಾಸ್-2024' ದತ್ತಾಂಶ ತಿಳಿಸಿದೆ. ಗೌಪ್ಯತೆ ಕಾಪಾಡಿದ ನೋಟಾ: ಸುಪ್ರೀಂ ಕೋರ್ಟ್‌ನ 2013ರ ಆದೇಶದ ಮೊದಲು, ಮತದಾರರು 'ಫಾರ್ಮ್ 49-O' ಮೂಲಕ ಈ ಹಕ್ಕನ್ನು ಚಲಾಯಿಸಬಹುದಿತ್ತು. ಆದರೆ ಅದು ಗೌಪ್ಯವಾಗಿರುತ್ತಿರಲಿಲ್ಲ. ಇವಿಎಂನಲ್ಲಿ ನೋಟಾ ಬಟನ್ ಅಳವಡಿಸಿದ ನಂತರ ಮತದಾರರ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ. ನೋಟಾ ಮತಗಳು ಬಹುಮತ ಪಡೆದರೂ ಸಹ, ಆ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಈ ಹಿಂದೆ ನಿರಾಕರಿಸಿತ್ತು. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳಿಗೆ ಏಪ್ರಿಲ್ ತಿಂಗಳಿನಲ್ಲಿ ಮತದಾನ ನಡೆದಿದ್ದು, ಸೋಮವಾರದ ಫಲಿತಾಂಶದಲ್ಲಿ ಈ ಕುತೂಹಲಕಾರಿ ಅಂಕಿ-ಅಂಶಗಳು ಬೆಳಕಿಗೆ ಬಂದಿವೆ.