ರೋಹಿತ್ ಶರ್ಮಾ ಸ್ಟೈಲ್ ಕಾಪಿ ಮಾಡಲು ಹೋಗಿ ನಗೆಪಾಟಲಿಗೀಡಾದ ಬಾಬರ್ ಅಜಮ್!
ಲಾಹೋರ್: ಪಾಕಿಸ್ತಾನ ಸೂಪರ್ ಲೀಗ್ (PSL) 2026ರ ಫೈನಲ್ ಪಂದ್ಯದಲ್ಲಿ ಬಾಬರ್ ಅಜಮ್ ನಾಯಕತ್ವದ ಪೆಶಾವರ್ ಝಲ್ಮಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ, ತಂಡದ ಗೆಲುವಿಗಿಂತ ನಾಯಕ ಬಾಬರ್ ಅಜಮ್ ಅವರ 'ಟ್ರೋಫಿ ಸೆಲೆಬ್ರೇಷನ್' ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಐಕಾನಿಕ್ ಸ್ಟೈಲ್ ಅನ್ನು ಅನುಕರಿಸಲು ಹೋಗಿ ಬಾಬರ್ ಅಜಮ್ ಟ್ರೋಲ್ ಆಗುತ್ತಿದ್ದಾರೆ.
ರೋಹಿತ್ ಶರ್ಮಾ 'ಸ್ಲೋ ವಾಕ್' ಅನುಕರಣೆ
ಭಾನುವಾರ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್ ಕಿಂಗ್ಸ್‌ಮೆನ್ ವಿರುದ್ಧದ ಪಂದ್ಯದಲ್ಲಿ ಗೆದ್ದ ನಂತರ, ಟ್ರೋಫಿ ಪಡೆಯಲು ಬಾಬರ್ ಅಜಮ್ ವೇದಿಕೆಗೆ ಆಗಮಿಸಿದರು.
ಈ ವೇಳೆ ಅವರು ಟಿ20 ವಿಶ್ವಕಪ್ ಗೆದ್ದಾಗ ರೋಹಿತ್ ಶರ್ಮಾ ಮಾಡಿದ್ದ 'ಸ್ಲೋ ಮೋಷನ್' ನಡಿಗೆಯನ್ನು ಕಾಪಿ ಮಾಡಲು ಪ್ರಯತ್ನಿಸಿದರು. ಆದರೆ ಬಾಬರ್ ಅವರ ಅತಿರೇಕದ ನಡಿಗೆ ಮತ್ತು ಹಾವಭಾವಗಳು ನೋಡುಗರಿಗೆ ವಿಚಿತ್ರವಾಗಿ ಕಂಡಿದ್ದು, ನೆಟ್ಟಿಗರು ಇದನ್ನು ಕಂಡು ಹಿಗ್ಗಾಮುಗ್ಗಾ ಕಾಲೆಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಬಾಬರ್ ಅವರ ಈ ವಿಡಿಯೋ ಇಟ್ಟುಕೊಂಡು 'ಮೀಮ್ ಹಬ್ಬ'ವೇ ಶುರುವಾಗಿದೆ.
ಪೆಶಾವರ್ ಝಲ್ಮಿಗೆ ಭರ್ಜರಿ ಜಯ
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪೆಶಾವರ್ ತಂಡ, ಹೈದರಾಬಾದ್ ತಂಡವನ್ನು ಕೇವಲ 129 ರನ್‌ಗಳಿಗೆ ಆಲೌಟ್ ಮಾಡಿತು. ಪೆಶಾವರ್ ಪರ ಆ್ಯರನ್ ಹಾರ್ಡಿ 4 ವಿಕೆಟ್ ಪಡೆದು ಮಿಂಚಿದರು.
ಬಳಿಕ ಸಾಧಾರಣ ಗುರಿ ಬೆನ್ನಟ್ಟಿದ ಪೆಶಾವರ್ ಝಲ್ಮಿ, 15.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಜಯ ಸಾಧಿಸಿತು. ಆ್ಯರನ್ ಹಾರ್ಡಿ (ಔಟಾಗದೆ 56) ಮತ್ತು ಅಬ್ದುಲ್ ಸಮದ್ (48) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪೆಶಾವರ್ ತಂಡ 2026ರ ಪಿಎಸ್ಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.