Vijay Victory-Siddaramaiah: ತಮಿಳುನಾಡಲ್ಲಿ ದಳಪತಿ ಕೀರ್ತಿ ಪಾತಾಕೆ, ವಿಜಯ್ ವಿಜಯೋತ್ಸವಕ್ಕೆ ಸಿದ್ದರಾಮಯ್ಯ ಭೇಷ್ ಅಂದ್ರಾ?
ಬೆಂಗಳೂರು (ಮೇ.04): ತಮಿಳುನಾಡು (Tamilnadu Politics) ರಾಜಕೀಯದಲ್ಲಿ ದೊಡ್ಡ ದಳಪತಿ ಸಂಚಲನ ಮೂಡಿಸಿದ್ದಾರೆ. ದ್ರಾವಿಡ ಪಕ್ಷಗಳ ದಶಕಗಳ ಪ್ರಾಬಲ್ಯವನ್ನುಮುರಿದ ದಳಪತಿ ವಿಜಯ್ (Vijay) ನೇತೃತ್ವದ ತಮಿಳಗಾ ವೆಟ್ರಿ ಕಲಗಂ (ಟಿವಿಕೆ) ತನ್ನ ಮೊದಲ ಚುನಾವಣೆಯಲ್ಲಿ (Election) ಭರ್ಜರಿ ಸಾಧನೆ ಮಾಡಿದೆ. ಇಲ್ಲಿಯವರೆಗಿನ ಟ್ರೆಂಡ್‌ಗಳ ಪ್ರಕಾರ ವಿಜಯ್ ಅವರ ಪಕ್ಷ 82 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಇದೇ ವೇಳೆ ಪಂಚರಾಜ್ಯ ಚುನಾವಣಾ ಫಲಿತಾಂಶದ ಬಗ್ಗೆ ಮಾತಾಡಿದ ಸಿಎಂ ಸಿದ್ದರಾಮಯ್ಯ, ವಿಜಯ್ ವಿಜಯದ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ.
ನಟ ವಿಜಯ್ ಗೆಲುವು ಬರೀ ತಮಿಳುನಾಡಿನಲ್ಲಿ ಅಷ್ಟೇ ಅಲ್ಲ ಇಡೀ ದೇಶದ ರಾಜ್ಯ ರಾಜಕೀಯದಲ್ಲೇ ಭಾರೀ ಚರ್ಚೆಯ ವಿಷಯವಾಗಿದೆ. ಹೊಸ ಕಟ್ಟಿ ಮೊದಲ ಬಾರಿಗೆ ಚುನಾವಣೆಯಲ್ಲಿ ನಿಂತ ನಟ ದಳಪತಿ ವಿಜಯ್ ಇದೀಗ ತಮಿಳುನಾಡಿನ ದಳಪತಿಯೇ ಆಗಿದ್ದಾರೆ. ವಿಜಯ್ ವಿಕ್ಟರಿ ಕಂಡು ರಾಜಕೀಯ ನಾಯಕರು ಕೂಡ ಅಚ್ಚರಿಗೊಂಡಿದ್ದಾರೆ.
ಮೊದಲಿಗೆ ರಾಜ್ಯದ ಉಪಚುನಾವಣೆ ಫಲಿತಾಂಶದ ಬಗ್ಗೆ ಮಾತಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾವು ಇದನ್ನ ನಿರೀಕ್ಷೆ ಮಾಡಿದ್ವಿ. ದಾವಣಗೆರೆಯಲ್ಲಿ ನಮ್ಮ ಕಾರಣದಿಂದಲೇ ಸ್ವಲ್ಪ ಲೀಡ್ ಕಡಿಮೆ ಆಗಬಹುದು. ಆದ್ರೆ ನಾವು ಅಲ್ಲಿ ಗೆಲ್ತೀವಿ ಎಂದಿದ್ದಾರೆ. ಮತ್ತೊಂದೆಡೆ ಬಾಗಲಕೋಟೆಯಲ್ಲೂ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆ ಫಲಿತಾಂಶ ವಿಚಾರದ ಬಗ್ಗೆ ಮಾತಾಡಿದ ಸಿದ್ದರಾಮಯ್ಯ ಅವ್ರು ಪಶ್ಚಿಮ ಬಂಗಾಳದಲ್ಲಿ ನಮ್ಮದೇನು ಇರಲಿಲ್ಲ. ಅಸ್ಸಾಂನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ. ಅಸ್ಸಾಂ ಜನರ ಆಶೀರ್ವಾದವನ್ನ ನಾವು ಒಪ್ಪುತ್ತೇವೆ. ಕೇರಳಾದಲ್ಲಿ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸ್ಥಾನದಲ್ಲಿ ಲೀಡ್ ಇದೆ. ಪಶ್ಚಿಮ ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಇರಬಹುದು ಎಂದಿದ್ದಾರೆ.
ತಮಿಳುನಾಡಿನಲ್ಲಿ ನಟ ವಿಜಯ್ ವಿಕ್ಟರಿ ಸಾಧಿಸಿದ್ದು, ಡಿಎಂಕೆಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ತಮಿಳುನಾಡಿನಲ್ಲೂ ಆಡಳಿತ ವಿರೋಧಿ ಅಲೆ ಇರಬಹುದು ಎಂದ ಸಿದ್ದರಾಮಯ್ಯ ಅವರು ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಿ ಹೊಸ ಅಲೆ ಎಬ್ಬಿಸಿದ ವಿಜಯ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಜಯಕ್ಕಾಗಿ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ ಹೇಳಿದ್ದು ಅಚ್ಚರಿಯ ವಿಚಾರವಾಗಿದೆ.