ಯುದ್ಧದಿಂದ ಸಾಮಾನ್ಯರ ಮೇಲೆಯೇ ಹೆಚ್ಚು ಸಮಸ್ಯೆ.. ಶಾಂತಿದೂತರಾಗೋಣ: ಹಂಪನಾ
ಬೆಂಗಳೂರು: ಯುದ್ದಕ್ಕೆ ಮುಂದಾಗದೇ ನಾವೆಲ್ಲರೂ ಶಾಂತಿದೂತರಾಗೋಣ. ಸಾಮಾನ್ಯ ಜನರ ಬದುಕಿನ ಮೇಲೆ ಆಗುವ ಪರಿಣಾಮ ತಪ್ಪಿಸೋಣ ಎಂದು ಸಾಹಿತಿ ಹಂ.ಪ.ನಾಗರಾಜಯ್ಯ ಸಲಹೆ ನೀಡಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಶೇಷಾದ್ರಿಪುರಂ ಕಾಲೇಜು ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಯುದ್ದ ಬೇಡ ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನ ಯಾವುದೇ ದೇಶದಲ್ಲಿ ಯುದ್ದ ನಡೆದರೂ ಅದರ ಪರಿಣಾಮ ಪ್ರತಿಯೊಬ್ಬರ ಮೇಲೂ ಒಂದಿಲ್ಲ ಒಂದು ರೀತಿ ಆಗಲಿದೆ.
ಇದರಿಂದ ಜನ ತೊಂದರೆಗೆ ಸಿಲುಕಬೇಕಾಗುತ್ತದೆ. ಗಾಂಧಿ ತತ್ವವನ್ನು ಅಳವಡಿಸಿಕೊಂಡು ಸಮಾಜಮುಖಿಯಾಗೋಣ ಎಂದು ಹೇಳಿದರು. ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಜಗತ್ತಿನಲ್ಲಿ ನೆಲ್ಸನ್ ಮಂಡೆಲಾ, ಬರಾಕ್ ಒಬಾಮ ಅವರಂತಹ ನಾಯಕರಿಗೂ ಪ್ರೇರಣೆಯಾದದ್ದು ಮಹಾತ್ಮ ಗಾಂಧಿಯೇ. ಶಾಂತಿ ದಿಕ್ಕಿನಲ್ಲಿ ನಡೆದರೆ ಸಮಾಜ ಸುಖಿಯಾಗಿರಲಿದೆ. ವಿಶ್ವದ ಹಲವು ಸಮಸ್ಯೆಗಳಿಗೆ ಗಾಂಧಿ ಚಿಂತನೆಯೇ ಪರಿಹಾರ ಎಂದು ತಿಳಿಸಿದರು.