BJP vs TMC; ಪಶ್ಚಿಮ ಬಂಗಾಲ ಅಧಿಕಾರ ಯಾರಿಗೆ?: ಇನ್ನೂ ನಿಗೂಢ
ಹೊಸದಿಲ್ಲಿ: ಪಶ್ಚಿಮ ಬಂಗಾಲದಲ್ಲಿ ಈ ಬಾರಿ ಯಾರು ಅಧಿಕಾರಕ್ಕೇರುತ್ತಾರೆ ಎಂಬುದು ಮತಗಟ್ಟೆ ಸಮೀಕ್ಷೆಗಳ ಬಳಿಕವೂ ನಿಗೂಢವಾಗಿಯೇ ಉಳಿದುಕೊಂಡಿದೆ. 294 ಸ್ಥಾನಗಳ ಬಂಗಾಲವಿಧಾನಸಭೆಯಲ್ಲಿ ಬಹುಮತಕ್ಕೆ 148 ಸ್ಥಾನಗಳ ಆವಶ್ಯಕತೆ ಇದ್ದು, ಟಿಎಂಸಿ ಹಾಗೂ ಬಿಜೆಪಿ ಕೂಟಗಳು ಬಹುಮತಕ್ಕೆ ಬೇಕಿರುವ ಸ್ಥಾನಗಳ ಸಮೀಪಕ್ಕೆ ತಲುಪಲಿವೆ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿವೆ. 7 ಸಮೀಕ್ಷೆಗಳಲ್ಲಿ 4 ಸಮೀಕ್ಷೆಗಳು ಬಿಜೆಪಿ ಕೂಟಕ್ಕೆ ಸ್ಪಷ್ಟ ಬಹುಮತ ದೊರೆಯುತ್ತದೆ ಎಂದು ಹೇಳಿದ್ದರೂ, ಟಿಎಂಸಿ ಗೆಲ್ಲಬಹುದಾದ ಸ್ಥಾನಗಳು ಬಹುಮತಕ್ಕೆ ಸಮೀಪದಲ್ಲೇ ಇವೆ.
3 ಸಮೀಕ್ಷೆಗಳ ಪ್ರಕಾರ ಟಿಎಂಸಿ ಕೂಟ ಗೆಲ್ಲಲಿದೆ. ಎಲ್ಲ ಸಮೀಕ್ಷೆಗಳ ಸರಾಸರಿಯನ್ನು ಗಮನಿಸಿದರೆ ಟಿಎಂಸಿ ಹಾಗೂ ಬಿಜೆಪಿ ತಲಾ 145 ಸ್ಥಾನಗಳನ್ನು ಪಡೆದುಕೊಳ್ಳಲಿವೆ. ಹೀಗಾಗಿ ಯಾರು ಬಹುಮತ ಪಡೆಯಬಹುದು ಎಂಬುದು ನಿಗೂಢವಾಗಿಯೇ ಉಳಿದುಕೊಂಡಿದೆ. ಪೀಪಲ್ ಪಲ್ಸ್ ಮತ್ತು ಜನಮತ ಪೋಲ್ಸ್ ಸಂಸ್ಥೆಗಳು ಮಾತ್ರ ಬಿಜೆಪಿ 100 ಸ್ಥಾನಗಳ ಗಡಿ ದಾಟುವುದಿಲ್ಲ ಎಂದಿವೆ. ಈ ಸಮೀಕ್ಷೆಗಳ ಪ್ರಕಾರ ಟಿಎಂಸಿ 180ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಉಳಿದಂತೆ ಬಹುತೇಕ ಸಮೀಕ್ಷೆಗಳು 2 ಪಕ್ಷಕ್ಕೂ ಬಹುಮತದ ಹತ್ತಿರದ ಸ್ಥಾನವನ್ನು ನೀಡಿವೆ.