Select Location
All Locations
State
Region
City / District
Kerala Exit Poll 2026: ಪಿಣರಾಯಿ 'ಹ್ಯಾಟ್ರಿಕ್' ಕನಸಿಗೆ ಯುಡಿಎಫ್ ಅಡ್ಡಗಾಲು?

Kerala Exit Poll 2026: ಪಿಣರಾಯಿ 'ಹ್ಯಾಟ್ರಿಕ್' ಕನಸಿಗೆ ಯುಡಿಎಫ್ ಅಡ್ಡಗಾಲು?

ತಿರುವನಂತಪುರ: ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಗಳು ಬುಧವಾರ ಹೊರಬಿದ್ದಿವೆ. ಇದರಂತೆ ಬಹುತೇಕ ಸಮೀಕ್ಷೆಗಳು ಕೇರಳದಲ್ಲಿ ಜನರು ಈ ಬಾರಿ ಯುಡಿಎಫ್‌ಗೆ ಮಣೆ ಹಾಕಲಿರುವುದು ನಿಚ್ಚಳ ಎಂದು ಹೇಳಿವೆ. ಕೇರಳದ ರಾಜಕೀಯ ಇತಿಹಾಸದಲ್ಲಿ ಈ ಬಾರಿಯ ಚುನಾವಣೆ ಹಿಂದೆಂದೂ ಕಾಣದ ಕುತೂಹಲಕ್ಕೆ ಸಾಕ್ಷಿಯಾಗಿದೆ. ದಶಕಗಳ ಕಾಲ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುತ್ತಿದ್ದ ಕೇರಳದ ಮತದಾರರು, ಕಳೆದ 2021ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗಕ್ಕೆ (ಎಲ್‌ಡಿಎಫ್) ಸತತ ಎರಡನೇ ಬಾರಿಗೆ ಅಧಿಕಾರ ನೀಡುವ ಮೂಲಕ ಇತಿಹಾಸ ಬರೆದಿದ್ದರು. ಈ ಬಾರಿ ಪಿಣರಾಯಿ 'ಹ್ಯಾಟ್ರಿಕ್' ಸಾಧನೆಯ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ (ಯುಡಿಎಫ್) ಪಾಲಿಗೆ ಇದು ಅಸ್ತಿತ್ವದ ಪ್ರಶ್ನೆಯಾಗಿದೆ.

ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ 'ಹ್ಯಾಟ್ರಿಕ್' ಕನಸು ಕಾಣುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಿನ್ನಡೆಯಾಗಲಿದೆ. ಕೇರಳದಲ್ಲಿ ಪ್ರಮುಖವಾಗಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಆದರೆ ಈ ಬಾರಿ ಆಡಳಿತ ವಿರೋಧಿ ಅಲೆ ಇರುವುದು ಕಂಡುಬಂದಿದೆ. ಕಳೆದೆರಡು ಬಾರಿ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್, ಈ ಬಾರಿ ಅಸ್ತಿತ್ವದ ಸವಾಲನ್ನು ಎದುರಿಸುತ್ತಿದೆ. ಪ್ರಮುಖವಾಗಿಯೂ ಪಕ್ಷದ ನಾಯಕರೊಳಗಿನ ಕಚ್ಚಾಟ, ಭಿನ್ನಭಿಪ್ರಾಯವು ಹಿನ್ನಡೆಗೆ ಕಾರಣವಾಗಿತ್ತು. ಆದರೆ ಈಗ ಬಂದಿರುವ ಚುನಾವಣೋತ್ತರ ಸಮೀಕ್ಷೆಗಳು ಅಲ್ಪ ನಿರಾಳವಾಗುವಂತೆ ಮಾಡಿದೆ. ಎಡರಂಗದ 'ನವಕೇರಳಂ' ಅಭಿವೃದ್ಧಿ ಮಾದರಿ ಮತ್ತು ವಿವಿಧ ಕಲ್ಯಾಣ ಯೋಜನೆಗಳು ಸರ್ಕಾರದ ಬಲವಾದ ಅಸ್ತ್ರಗಳಾಗಿವೆ. 

ಆದರೆ, ನಿರುದ್ಯೋಗ, ದರ ಏರಿಕೆ, ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು ಮತ್ತು ರಾಜ್ಯದ ಸಾಲದ ಹೊರೆಯ ಬಗ್ಗೆ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ. ಕಾಂಗ್ರೆಸ್ ಈ ಬಾರಿ 'ಇಂದಿರಾ ಗ್ಯಾರಂಟಿ' ಯೋಜನೆಗಳ ಮೂಲಕ ಮಹಿಳೆಯರು ಮತ್ತು ಯುವಕರನ್ನು ಸೆಳೆಯಲು ಮುಂದಾಗಿದೆ. ಇನ್ನೊಂದೆಡೆ, ಬಿಜೆಪಿಯ ಎನ್‌ಡಿಎ ಕೂಟ ಕಳೆದ ಬಾರಿ ಕಳೆದುಕೊಂಡಿದ್ದ ಸ್ಥಾನಗಳನ್ನು ಮರಳಿ ಪಡೆಯಲು ಮತ್ತು ತನ್ನ ಮತ ಹಂಚಿಕೆಯನ್ನು ಹೆಚ್ಚಿಸಿಕೊಳ್ಳಲು ಭಾರಿ ಕಸರತ್ತು ನಡೆಸುತ್ತಿದೆ. ಚುನಾವಣೋತ್ತರ ಸಮೀಕ್ಷೆ: 140 ಸದಸ್ಯ ಬಲದ ಕೇರಳದ ವಿಧಾನಸಭೆಯಲ್ಲಿ ಅಧಿಕಾರಕ್ಕೇರಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 71 ಆಗಿದೆ. ಬಹುತೇಕ ಎಲ್ಲ ಸಮೀಕ್ಷೆಗಳು ಯುಡಿಎಫ್ ಬಹುಮತ ಗಳಿಸಲಿದೆ ಎಂದು ಭವಿಷ್ಯ ನುಡಿದಿವೆ.


Prajavani 2 days ago
Home Flash News