ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಗೆ 600 ಕೋಟಿ ರೂ.: ಸಂಪುಟ ಸಭೆಯಲ್ಲಿ ಪ್ರಸ್ತಾಪ?
ಬೆಂಗಳೂರು: ಅಲ್ಪಸಂಖ್ಯಾತರು ವಾಸಿಸುವ ಕಾಲೋನಿಗಳಿಗೆ ಅಭಿವೃದ್ಧಿ ಕಲ್ಪಿಸಲು ಮುಂದಿನ 2 ವರ್ಷಕ್ಕೆ 600 ಕೋಟಿ ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಗುರುವಾರ ಸಂಜೆ 4.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯ ಮುಂದೆ ಈ ವಿಷಯ ಪ್ರಸ್ತಾಪ ಆಗುವ ಸಾಧ್ಯತೆಗಳಿವೆ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ವಾಸಿಸುವ ಕಾಲೋನಿಗಳಿಗೆ ಅಭಿವೃದ್ಧಿ ಕಲ್ಪಿಸಲು 2026 27 ಹಾಗೂ 2027 28 ನೇ ಸಾಲಿಗೆ ಒಟ್ಟು 600 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಯು ಸಂಪುಟ ಸಭೆ ಮುಂದೆ ಬರಲಿದೆ ಎನ್ನಲಾಗಿದೆ.
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ: ಅದೇ ರೀತಿ ಕಳೆದ ಸಂಪುಟ ಸಭೆಯಲ್ಲಿ ಯಾವುದೇ ನಿರ್ಣಯ ಆಗದೆ ಮುಂದೂಡಿಕೆ ಆಗಿದ್ದ 18 ಸಾವಿರ ಕೋಟಿ ರೂ. ಮೊತ್ತದ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ಸಂಬಂಧಿಸಿದ ವಿಷಯ ಕೂಡ ಪ್ರಸ್ತಾಪ ಆಗುವ ಸಂಭವವಿದೆ. ಇದಕ್ಕಾಗಿ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ 9 ಗ್ರಾಮಗಳ ಸುಮಾರು 7480 ಎಕರೆಯನ್ನು ವಶಪಡಿಸಿಕೊಳ್ಳಬೇಕಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಪ್ರಾಯೋಜಿತ ಬೆಂಗಳೂರು ಹೈದರಾಬಾದ್ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ತನ್ನ ತಾತ್ತ್ವಿಕ ಒಪ್ಪಿಗೆ ನೀಡಬಹುದು ಎನ್ನಲಾಗಿದೆ.
ಅಲೆಮಾರಿಗಳ ಒಳಮೀಸಲು ‘ತಲೆನೋವು’ ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಶೇ.15ರ ಮೀಸಲಾತಿಯನ್ನು ಹಂಚಿಕೆ ಮಾಡಿರುವ ರಾಜ್ಯ ಸರ್ಕಾರಕ್ಕೆ ಅಲೆಮಾರಿಗಳ ಒಳಮೀಸಲು ತಲೆನೋವು ಬಿಡದೆ ಕಾಡುತ್ತಿದೆ. ಪ್ರವರ್ಗ ‘ಎ’ಗೆ ಶೇ.5.25, ಪ್ರವರ್ಗ ‘ಬಿ’ಗೆ ಶೇ.5.25 ಹಾಗೂ ಪ್ರವರ್ಗ ‘ಸಿ’ಗೆ ಶೇ.4.5 ರಷ್ಟು ಒಳಮೀಸಲಾತಿ ಹಂಚಿಕೆ ಮಾಡಿದೆ. ಆದರೆ, ಅಲೆಮಾರಿ, ಅರೆಅಲೆಮಾರಿ ಸೇರಿ 59 ಸಣ್ಣ ಸಮುದಾಯಗಳನ್ನು ಪ್ರವರ್ಗ ‘ಸಿ’ ವ್ಯಾಪ್ತಿಯಲ್ಲಿರಿಸಿ ಶೇ.4.5 ರಷ್ಟು ಮೀಸಲಾತಿಗೆ ಕೊಟ್ಟಿರುವುದಕ್ಕೆ ಅಲೆಮಾರಿಗಳು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ತಮಗೆ ಪ್ರತ್ಯೇಕವಾಗಿ ಶೇ.1 ರಷ್ಟು ಮೀಸಲಾತಿ ಕೊಡಲು ನ್ಯಾ.ನಾಗಮೋಹನ್ ದಾಸ್ ಆಯೋಗ ಶಿಫಾರಸು ಮಾಡಿದ್ದು, ವ್ಯತಿರಿಕ್ತ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ.
ಇದರ ವಿರುದ್ಧ ನ್ಯಾಯಾಂಗ ಹೋರಾಟ ಮಾಡುವುದಾಗಿ ಎಚ್ಚರಿಸಿದೆ. ಈ ವಿಷಯ ಗುರುವಾರ ಸಂಪುಟ ಸಭೆಯಲ್ಲಿ ಪ್ರಸ್ತಾಪ ಆಗಬಹುದು ಎನ್ನಲಾಗಿದೆ. ಇನ್ನು ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ 54 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಕ್ರಮ ವಹಿಸಲು ಆಯಾ ಇಲಾಖೆಗಳಿಗೆ ಸರ್ಕಾರ ಆದೇಶಿಸಿದ್ದು, ಭವಿಷ್ಯದಲ್ಲಿ 8 ಸಾವಿರ ಪೊಲೀಸ್ ಕಾನ್‌ಸ್ಟೇಬಲ್, 20 ಸಾವಿರ ಶಿಕ್ಷಕರ ನೇಮಕಾತಿಗೂ ಮುಂದಾಗುವ ಲಕ್ಷಣಗಳಿವೆ. ಆದರೆ, ಈ ನೇಮಕಾತಿಗಳ ಮೇಲೆ ಒಳಮೀಸಲು ಹಂಚಿಕೆಯ ಒಳ ಏಟು ಬೀಳುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.