ನೊಬೆಲ್ ಪ್ರಶಸ್ತಿ ಪಡೆಯಲು ಇಲ್ಲಿವೆ 10 ಸಲಹೆಗಳು
ಜಗತ್ತಿನಲ್ಲೇ ಸರ್ವಶ್ರೇಷ್ಠ ಎಂದೆನಿಸಿಕೊಂಡಿರುವ ನೊಬೆಲ್ ಪ್ರಶಸ್ತಿ ಎಂದರೆ ಯಾರು ತಾನೆ ಬೇಡ ಎಂದಾರು. ವಿದ್ಯಾರ್ಥಿಗಳಿಂದ ಹಿಡಿದು ದೇಶದ ಅಧ್ಯಕ್ಷರವರೆಗೂ ನೊಬೆಲ್ ಕನಸು ಕಾಣುತ್ತಿರುವವರು ಹಲವರು. ಹಲವಾರು ವರ್ಷಗಳ ನಿರಂತರ ಸಂಶೋಧನೆ, ಅಧ್ಯಯನ ಅಥವಾ ವೃತ್ತಿ ಮೂಲಕ ಸಮಾಜದಲ್ಲಿ ತಂದ ಬದಲಾವಣಗಳು ಇದಕ್ಕೆ ಕಾರಣ ಎಂದೇ ಹಲವರು ನಂಬಿದ್ದಾರೆ. ಆದರೆ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನೀಡಿರುವ ಸಲಹೆಗಳ ಪ್ರಕಾರ ಈ ಹತ್ತು ಅಂಶಗಳನ್ನು ಪಾಲಿಸಿದರೆ ಸಾಕು. ವಿಜ್ಞಾನ ವಿಷಯದ ನೊಬೆಲ್ ಪ್ರಶಸ್ತಿ ಗ್ಯಾರಂಟಿ ಎನ್ನುತ್ತದೆ ಈ ಸಂಸ್ಥೆ.
1. ನಿಮ್ಮ ವೃತ್ತಿಜೀವನವನ್ನು ನೊಬೆಲ್ ಪ್ರಶಸ್ತಿ ಪಡೆಯುವ ಗುರಿಯೊಂದಿಗೆ ಎಂದಿಗೂ ಆರಂಭಿಸಬೇಡಿ.
2. ನಿಮ್ಮ ಪ್ರಯೋಗಗಳು ಆಗಾಗ್ಗೆ ವಿಫಲವಾಗಲಿ ಎಂದುಕೊಳ್ಳಿ. ಏಕೆಂದರೆ ಸೋಲುಗಳು ಕೆಲವೊಮ್ಮೆ ಅನಿರೀಕ್ಷಿತ ಮತ್ತು ಅದ್ಭುತ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತವೆ.
3. ಇತರ ವಿಜ್ಞಾನಿಗಳೊಂದಿಗೆ ಸಹಕರಿಸಿ, ಆದರೆ ಆ ತಂಡದಲ್ಲಿ ಮೂರಕ್ಕಿಂತ ಹೆಚ್ಚು ಜನರಿರಬಾರದು. ನೊಬೆಲ್ ಪ್ರಶಸ್ತಿಯನ್ನು ಗರಿಷ್ಠ ಮೂವರಿಗೆ ಮಾತ್ರ ಹಂಚಲಾಗುತ್ತದೆ ಎಂಬುದು ನೆನಪಿರಲಿ.
4. ನೊಬೆಲ್ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸಲು, ಕುಟುಂಬ ಅಥವಾ ಸಂಗಾತಿಯನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಿ
5. ಈಗಾಗಲೇ ನೊಬೆಲ್ ಪ್ರಶಸ್ತಿ ಗೆದ್ದವರ ಪ್ರಯೋಗಾಲಯದಲ್ಲಿ ಕೆಲಸ ಮಾಡಿ. ಇದು ನಿಮ್ಮ ಜ್ಞಾನ ಮತ್ತು ಅವಕಾಶವನ್ನು ಹೆಚ್ಚಿಸುತ್ತದೆ.
6. ಭವಿಷ್ಯದಲ್ಲಿ ನೊಬೆಲ್ ಗೆಲ್ಲುವವರ ಪ್ರಯೋಗಾಲಯದಲ್ಲಿ ಕೆಲಸ ಮಾಡಿ. ಬೆಳೆಯುತ್ತಿರುವ ಪ್ರತಿಭೆ ಜೊತೆಗಿದ್ದರೆ ನಿಮ್ಮ ಅದೃಷ್ಟವೂ ಖುಲಾಯಿಸಬಹುದು.
7. ಅತ್ಯುತ್ತಮ ಪ್ರಯೋಗಗಳನ್ನು ವಿನ್ಯಾಸಗೊಳಿಸಿ, ಅದಕ್ಕೆ ಅದೃಷ್ಟವು ಸಾಥ್ ನೀಡಿದರೆ ನಿಮಗೆ ಯಶಸ್ಸು ಸಿಗುತ್ತದೆ.
8. ನೊಬೆಲ್ ಗೆಲ್ಲುವುದನ್ನೇ ಗುರಿಯಾಗಿಸಿಕೊಂಡು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಡಿ. ಜೀವನದಲ್ಲಿ ಅದಕ್ಕಿಂತ ಮುಖ್ಯವಾದ ವಿಷಯಗಳು ಬೇರೆ ಇವೆ.
9. ಸ್ವೀಡಿಷ್ ವಿಜ್ಞಾನಿಗಳೊಂದಿಗೆ ಯಾವಾಗಲೂ ಸೌಜನ್ಯದಿಂದ ವರ್ತಿಸಿ.
10. ಜೀವಶಾಸ್ತ್ರವನ್ನು (Biology) ಅಧ್ಯಯನ ಮಾಡಿ. ಇತ್ತೀಚಿನ ದಶಕಗಳಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಶಸ್ತಿಗಳು ಒಲಿಯುತ್ತಿವೆ.