ಸಂಪುಟದಿಂದ ಜಮೀರ್ ಅಹಮದ್‌ಗೆ ಕಿಕ್ಔಟ್?: ಹೈಕಮಾಂಡ್‌ಗೆ ವರದಿ ತಲುಪುತ್ತಿದ್ದಂತೆ ಜಬ್ಬಾರ್ ರಾಜೀನಾಮೆ, ನಜೀರ್‌ಗೂ ಕೊಕ್!
ಬೆಂಗಳೂರು (ಏ.11): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್ರಚನೆಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ, ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಸಂಕಷ್ಟ ಎದುರಾಗುವ ಮುನ್ಸೂಚನೆ ಸಿಕ್ಕಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಆಂತರಿಕ ಬೆಳವಣಿಗೆಗಳ ಕುರಿತಾದ ವರದಿಯೊಂದು ಹೈಕಮಾಂಡ್ ಕೈಸೇರಿದ್ದು, ಮುಂದಿನ ದಿನಗಳಲ್ಲಿ ಜಮೀರ್ ಅಹಮದ್ ಅವರ ಸಚಿವ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ದಟ್ಟವಾಗಿದೆ.
ವರದಿಯಲ್ಲೇನಿದೆ? ಸಂಚಲನ ಮೂಡಿಸಿದ ಅಭಿಶೇಕ್ ದತ್ ರಿಪೋರ್ಟ್!
ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ನಲ್ಲಿನ ಆಂತರಿಕ ಅಸಮಾಧಾನ ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಎಐಸಿಸಿ (AICC) ಉಸ್ತುವಾರಿ ಕಾರ್ಯದರ್ಶಿ ಅಭಿಶೇಕ್ ದತ್ ಅವರು ಸುದೀರ್ಘ ವರದಿಯೊಂದನ್ನು ಸಿದ್ಧಪಡಿಸಿ ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಕ್ಷೇತ್ರದ ಗೊಂದಲಗಳಿಗೆ ಪ್ರಮುಖ ಕಾರಣಗಳು ಮತ್ತು ಕೆಲವು ನಾಯಕರ ನಡೆಗಳ ಬಗ್ಗೆ ಗಂಭೀರ ಉಲ್ಲೇಖಗಳಿವೆ ಎನ್ನಲಾಗಿದೆ. ಈ ವರದಿ ಕೈಸೇರುತ್ತಿದ್ದಂತೆಯೇ ಎಚ್ಚೆತ್ತಿರುವ ಕಾಂಗ್ರೆಸ್ ವರಿಷ್ಠರು, ರಾಜ್ಯ ಘಟಕದಲ್ಲಿ ಆಪರೇಷನ್ ಕ್ಲೀನ್ ಆರಂಭಿಸಿದ್ದಾರೆ.
ಸಸ್ಪೆಂಡ್ ಮಾಡುವ ಮುನ್ನವೇ ಜಬ್ಬಾರ್ ರಾಜೀನಾಮೆ!
ವರದಿಯ ಬೆನ್ನಲ್ಲೇ ಹೈಕಮಾಂಡ್ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇದರ ಮೊದಲ ಭಾಗವಾಗಿ ಅಬ್ದುಲ್ ಜಬ್ಬಾರ್ ಅವರನ್ನು ಅಮಾನತು ಮಾಡಲು ಹೈಕಮಾಂಡ್ ತೀರ್ಮಾನಿಸಿತ್ತು. ಆದರೆ, ಈ ಸುಳಿವು ಸಿಗುತ್ತಿದ್ದಂತೆಯೇ ಅಬ್ದುಲ್ ಜಬ್ಬಾರ್ ಅವರು ಶಿಸ್ತು ಕ್ರಮದಿಂದ ಬಚಾವಾಗಲು ಮುನ್ನೆಚ್ಚರಿಕೆಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಾದ ಬೆನ್ನಲ್ಲೇ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಗೂ ರಾಜೀನಾಮೆ ನೀಡುವಂತೆ ಅವರಿಗೆ ತಾಕೀತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.