ನಂಗೂ ಫ್ರೀ, ನಿಂಗೂ ಫ್ರೀ ಎಂದ ರಾಮೇಶ್ವರಂ ಕೆಫೆ: ಸುಡು ಬಿಸಿಲನ್ನೂ ಲೆಕ್ಕಿಸದೆ ಪಾಪ ಹೇಗೆ ನಿಂತಿದ್ದಾರೆ ನೋಡಿ ಜನ
ಉಚಿತ ಎಂದ್ರೆ ಸಾಕು ಬಹುತೇಕ ಎಲ್ಲರ ಕಿವಿಗಳೂ ನೆಟ್ಟಗಾಗುತ್ತವೆ, ಕಣ್ಣುಗಳು ಅರಳಿಬಿಡುತ್ತವೆ. ಏಕೆಂದ್ರೆ ಈ ಶಬ್ದದಲ್ಲಿಯೇ ಅದು ಏನೋ ಒಂಥರಾ ಮಾಯೆ ಇದೆ. ಇದೇ ಕಾರಣಕ್ಕೆ ಉಚಿತ ಎನ್ನೋದು ರಾಜಕಾರಣಿಗಳಿಗೆ ದೊಡ್ಡ ವರದಾನವಾಗಿಬಿಟ್ಟಿದೆ. 'ಒಂದಿಷ್ಟು ಬೀಸಾಕಿದ್ರೆ ಸಾಕು, ವೋಟ್ ಬರತ್ತೆ' ಎನ್ನುವಂಥ ಕೀಳು ಮಾತುಗಳನ್ನೂ ಅದೆಷ್ಟೋ ರಾಜಕಾರಣಿಗಳು ಆಡುವುದು ಉಂಟು. ಅದಕ್ಕೆ ತಕ್ಕಂತೆ ನಮ್ಮ ಮತದಾರರು ಕೂಡ ಕೊಟ್ಟದ್ದನ್ನು ಪ್ರಸಾದ ಎಂದು ಸ್ವೀಕರಿಸಿ ಮತ ಹಾಕುವುದೂ ಉಂಟು. ಅಷ್ಟಕ್ಕೂ ಇದೇನು ಇಂದು, ನಿನ್ನೆಯ ಮಾತಲ್ಲ ಬಿಡಿ. ಫ್ರೀ ಆಗಿ ಸಿಗತ್ತೆ ಎಂದರೆ ಏನನ್ನೂ ಬಿಡಲ್ಲ ಒಂದಿಷ್ಟು ಮಂದಿ. ಅದಕ್ಕೆ ಸಾಕ್ಷಿಯಾಗಿ ನಿಂತಿರೋದೇ ಈ ವಿಡಿಯೋ.
ರಾಮೇಶ್ವರಂ ಕೆಫೆ
ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ರಾಮೇಶ್ವರಂ ಕೆಫೆ ಹೊಸದಾಗಿ ಉದ್ಘಾಟನೆಗೊಂಡಿದೆ. ಜನರನ್ನು ಆಕರ್ಷಿಸುವ ಸಲುವಾಗಿ ಯಾವುದೇ ಮಳಿಗೆಗಳು, ಹೋಟೆಲ್ಗಳು ಸೇರಿ ಯಾವುದೇ ವ್ಯಾಪಾರಸ್ಥರು ಒಂದಷ್ಟು ದಿನ ಆಕರ್ಷಕ ಕೊಡುಗೆ ನೀಡುವುದು ಸರ್ವೇ ಸಾಮಾನ್ಯ. ಡಿಸ್ಕೌಂಟ್ಗಳ ಭರಾಟೆಯೂ ಇರುತ್ತದೆ. ಇದು ಜನರನ್ನು ಸೆಳೆದುಕೊಳ್ಳುವ ತಂತ್ರ. ಹೀಗೆ ಡಿಸ್ಕೌಂಟ್ಗೆ ಬರುವ ಜನರ ಪೈಕಿ ಕೆಲವರಾದರೂ ತಮ್ಮ ಕಾಯಂ ಗಿರಾಕಿಗಳಾಗುತ್ತಾರೆ ಎನ್ನುವುದು ಅವರಿಗೆ ತಿಳಿದಿರುತ್ತದೆ. ಇದು ಮಾರುಕಟ್ಟೆಯ ತಂತ್ರ, ಬಿಜಿನೆಸ್ ಟೆಕ್ನಿಕ್. ಇದು ಅವರಿಗೆ ಅವಶ್ಯಕವೂ ಹೌದು, ಅನಿವಾರ್ಯವೂ ಹೌದು.
ಫ್ರೀ ಊಟ
ಅದೇ ರೀತಿ ಇದೀಗ ರಾಮೇಶ್ವರಂ ಕೆಫೆ ಹಾಗೆಯೇ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಫ್ರೀ ಊಟದ ವ್ಯವಸ್ಥೆ ಮಾಡಿತ್ತು. ಇಂಥ ಆಫರ್ ಕೊಟ್ಟಾಗ ಅದು ಹೇಗೆ ಜನರಿಗೆ ತಲುಪುತ್ತದೆಯೋ ಆ ದೇವರೇ ಬಲ್ಲ ಎಂದು ಹೇಳುವವರೇ ಹಲವರು. ಯಾವುದಾದರೂ ಮಹತ್ವದ ಮಾಹಿತಿ ಕೊಟ್ಟರೆ ಜನರಿಗೆ ಅದು ಗೊತ್ತಾಗುವುದೇ ಇಲ್ಲ. ಆದರೆ ಉಚಿತದ ಬಗ್ಗೆ ಎಲ್ಲೋ ಒಂದು ಕಡೆ ಚಿಕ್ಕ ಬೋರ್ಡ್ ಹಾಕಿದ್ರೂ ಸಾಕು, ಅದು ಇಡೀ ಊರಿಗೇ ಪ್ರಚಾರ ಆಗಿ ಬಿಡುತ್ತದೆ ಎನ್ನುವುದಕ್ಕೆ ಈಗ ವೈರಲ್ ಆಗಿರೋ ವಿಡಿಯೋ ಸಾಕ್ಷಿಯಾಗಿದೆ.