ಅಲ್ಪಸಂಖ್ಯಾತರನ್ನು ಭಯದಲ್ಲಿಡುವುದೇ ಬಿಜೆಪಿಯ ಪ್ರಮುಖ ಗುರಿ: ಸ್ಟಾಲಿನ್ ಆರೋಪ
ಚೆನ್ನೈ: ಅಲ್ಪಸಂಖ್ಯಾತರನ್ನು ಭಯದಲ್ಲಿಡುವುದು ಬಿಜೆಪಿಯ ಪ್ರಮುಖ ಗುರಿಯಾಗಿದೆ. ಅವರು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಆರೋಪ ಮಾಡಿದ್ದಾರೆ. ಅದರಲ್ಲೂ ಮುಸ್ಲಿಮರ ಮೇಲೆ ಬಿಜೆಪಿ ನಿರಂತರ ದಾಳಿ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ. ಬಿಜೆಪಿ ಇದೀಗ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡಿದೆ. ಅವರು ಶಾಂತಿಯುತವಾಗಿ ಕ್ರಿಸ್ಮಸ್ ಆಚರಿಸಲು ಕೂಡ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಅಲ್ಪಸಂಖ್ಯಾತರಲ್ಲಿ ನಿರಂತರವಾಗಿ ಭಯ ಹುಟ್ಟಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇದು ದೇಶದಾದ್ಯಂತ ಹರಡುತ್ತಿದೆ. ಮಣಿಪುರದಲ್ಲಿ ಏನಾಗುತ್ತಿದೆ ಎನ್ನುವುದನ್ನು ದೇಶವೇ ನೋಡುತ್ತಿದೆ ಎಂದು ಹೇಳಿದ್ದಾರೆ.