RCB vs RR: ಜೋಶ್ ಹೇಝಲ್‌ವುಡ್ ಕಣಕ್ಕಿಳಿಯುತ್ತಾರಾ, ಇಲ್ವಾ? ಇಲ್ಲಿದೆ ಮಾಹಿತಿ
IPL 2026 RCB vs RR: ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಏಪ್ರಿಲ್ 10 ರಂದು ನಡೆಯಲಿರುವ ಈ ಪಂದ್ಯದ ಮೂಲಕ ಆಸ್ಟ್ರೇಲಿಯನ್ ವೇಗಿ ಜೋಶ್ ಹೇಝಲ್‌ವುಡ್ ಆರ್‌ಸಿಬಿ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಭರ್ಜರಿ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ (RCB) ತಂಡಕ್ಕೆ ಮೂರನೇ ಪಂದ್ಯಕ್ಕೂ ಮುನ್ನ ಆನೆಬಲ ಬಂದಂತಾಗಿದೆ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ವೇಗಿ ಜೋಶ್ ಹೇಝಲ್‌ವುಡ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಗಾಯದ ಸಮಸ್ಯೆ ಮತ್ತು ಪುನರಾಗಮನ:
ಹ್ಯಾಮ್‌ಸ್ಟ್ರಿಂಗ್ ಮತ್ತು ಅಕಿಲಿಸ್ ಸ್ನಾಯು ಸೆಳೆತದಿಂದಾಗಿ ಜೋಶ್ ಹೇಝಲ್‌ವುಡ್ ಈ ಸೀಸನ್‌ನ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದರು. ಇತ್ತೀಚಿನ ವರದಿಗಳ ಪ್ರಕಾರ, ಅವರು ನೆಟ್ಸ್‌ನಲ್ಲಿ ಪೂರ್ಣ ಪ್ರಮಾಣದ ಬೌಲಿಂಗ್ ಅಭ್ಯಾಸ ಆರಂಭಿಸಿದ್ದು, ಪೂರ್ಣ ಫಿಟ್ನೆಸ್ ಮರಳಿಸಿಕೊಂಡಿದ್ದಾರೆ. ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೇ ಅವರು ಲಭ್ಯರಿರಬೇಕಿತ್ತಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಿರುವ ಜೋಶ್ ಹೇಝಲ್‌ವುಡ್ ಅವರನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಅದರಂತೆ ಏಪ್ರಿಲ್ 10 ರಂದು ಗುವಾಹಟಿಯಲ್ಲಿ ನಡೆಯಲಿರುವ ಪಂದ್ಯದ ಮೂಲಕ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ.
ಆಡುವ ಬಳಗದಿಂದ ಯಾರು ಔಟ್?
ಜೋಶ್ ಹೇಝಲ್‌ವುಡ್ ತಂಡಕ್ಕೆ ಮರಳಿದರೆ, ಕಳೆದ ಪಂದ್ಯಗಳಲ್ಲಿ ಆಡಿದ್ದ ನ್ಯೂಝಿಲೆಂಡ್‌ನ ವೇಗಿ ಜೇಕ್ಕಬ್ ಡಫಿ ಅವರು ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಡಫಿ ವಿಕೆಟ್ ಪಡೆದಿದ್ದರೂ, ಹೇಝಲ್‌ವುಡ್ ಅವರಷ್ಟು ಪ್ರಭಾವಶಾಲಿಯಾಗಿರಲಿಲ್ಲ. ಹೀಗಾಗಿ ಡಫಿ ಅವರನ್ನು ಹೊರಗಿಟ್ಟು ಹೇಝಲ್ವುಡ್ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚು.
ರಾಜಸ್ಥಾನ್ ರಾಯಲ್ಸ್ ಸವಾಲು:
ರಾಜಸ್ಥಾನ್ ತಂಡದ ಅಗ್ರ ಕ್ರಮಾಂಕದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಬಲಿಷ್ಠ ಬ್ಯಾಟರ್‌ಗಳಿದ್ದಾರೆ. ಇವರನ್ನು ಕಟ್ಟಿಹಾಕಲು ಹೇಝಲ್‌ವುಡ್ ಅವರ ಎತ್ತರದ ಬೌನ್ಸ್ ಮತ್ತು ಸ್ವಿಂಗ್ ಆರ್‌ಸಿಬಿಗೆ ಅಸ್ತ್ರವಾಗಲಿದೆ.
ಗುವಾಹಟಿಯ ಪಿಚ್ ವೇಗಿಗಳಿಗೆ ತುಸು ನೆರವು ನೀಡುವುದರಿಂದ ಹೇಝಲ್‌ವುಡ್ ಆಟ ಇಲ್ಲಿ ನಿರ್ಣಾಯಕವಾಗಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಜೋಶ್ ಹೇಝಲ್‌ವುಡ್ ಅವರ ಆಗಮನವು ಆರ್‌ಸಿಬಿ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಈ ಮೂಲಕ ಆರ್ಆರ್ ಪಡೆಯನ್ನು ಬಗ್ಗು ಬಡಿದು ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆಯಾ ಕಾದು ನೋಡಬೇಕಿದೆ.