ಕುಮಾರಸ್ವಾಮಿ ಕೇಂದ್ರ ಸಚಿವರಾಗಿರೋದು ದಕ್ಷಿಣ ಭಾರತದ ಅದೃಷ್ಟ: ನಾರಾ ಲೋಕೇಶ್
ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವರಾಗಿರುವುದು ದಕ್ಷಿಣ ಭಾರತದ ಅದೃಷ್ಟ ಎಂದು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಹೇಳಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದಾರೆ.
‘ಆಂಧ್ರ ಪ್ರದೇಶದ ವಿಶಾಖಪಟ್ಟಣ ಉಕ್ಕು ಕಾರ್ಖಾನೆಯನ್ನು ಮುಚ್ಚುವ ಪರಿಸ್ಥಿತಿ ಎದುರಾಗಿತ್ತು. ಆದರೆ, ಕುಮಾರಸ್ವಾಮಿ ಅವರು ಮಾತನಾಡಿ, ನಾನು ನಿಮ್ಮೊಂದಿಗಿದ್ದೇನೆ. ವಿಶಾಖಪಟ್ಟಣದ ಉಕ್ಕು ಕಾರ್ಖಾನೆಯನ್ನು ಖಾಸಗೀಕರಣವಾಗುವುದಕ್ಕೆ ಬಿಡುವುದಿಲ್ಲ ಎಂದು ಮಾತುಕೊಟ್ಟಿದ್ದರು. ಆದರಂತೆಯೇ ನಡೆದುಕೊಂಡಿದ್ದಾರೆ’ ಎಂದು ಲೋಕೇಶ್ ತಿಳಿಸಿದ್ದಾರೆ.
‘ವಿಶಾಖಪಟ್ಟಣ ಉಕ್ಕು ಕಾರ್ಖಾನೆ ಮಾತ್ರವಲ್ಲ, ಅನಕಪಲ್ಲಿಯಲ್ಲಿ ದೇಶದ ಅತಿದೊಡ್ಡ ಗ್ರೀನ್ ಪ್ಲ್ಯಾಂಟ್ ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕೆ ಕುಮಾರಸ್ವಾಮಿ ಅವರೇ ಕಾರಣ ಎಂದರೇ ತಪ್ಪಲ್ಲ. ಇದಕ್ಕಾಗಿ ನಾವೆಲ್ಲ ಅವರ ಋಣದಲ್ಲಿದ್ದೇವೆ’ ಎಂದಿದ್ದಾರೆ. ‘ಕರ್ನಾಟಕದ ಭೂಮಿ ಪ್ರವಿತ್ರವಾದದ್ದು. ಇಲ್ಲಿಯ ಸಂಸ್ಕೃತಿ, ಪರಂಪರೆ ದೊಡ್ಡದು. ನಮ್ಮ ಮಕ್ಕಳು ಡಾಕ್ಟರ್, ಎಂಜನಿಯರ್ ಆಗಬೇಕು ಎಂದು ಆಸೆ ಪಡುವ ತಂದೆ-ತಾಯಿಯಂದಿರು ನಮ್ಮ ಮಗು ಸೈನಿಕನಾಗಬೇಕು ಎಂದು ಏಕೆ ಪಡುತ್ತಿಲ್ಲ. ನಾವು ಇಲ್ಲಿ ನೆಮ್ಮದಿಯಿಂದ ಇದ್ದೇವೆಂದರೆ ಅದಕ್ಕೆ ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತಿರುವ ಸೈನಿಕರೇ ಕಾರಣ.
ದೇಶ ರಕ್ಷಣೆ ಕಾರ್ಯಕ್ಕಿಂತ ದೊಡ್ಡ ಸೌಭಾಗ್ಯ ಮತ್ತೊಂದಿಲ್ಲ’ ಎಂದೂ ಲೋಕೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಮಾತನಾಡಿ, ‘ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ಹೂಳು ತುಂಬಿದೆ. ಇದಕ್ಕೆ ಪರ್ಯಾಯವಾಗಿ ನವಲಿ ಬಳಿ ಜಲಾಶಯ ನಿರ್ಮಿಸುವ ಕುರಿತು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಸೌಹಾರ್ದಯುತವಾಗಿ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದಿದ್ದಾರೆ.
‘ನಾರಾ ಲೋಕೇಶ್ ಸಚಿವರಾಗಿ ಉತ್ತಮ ಆಡಳಿತ ನಡೆಸಿ ಪ್ರಬುದ್ಧ ರಾಜಕಾರಣಿಯಾಗಿ ಬೆಳೆಯುತ್ತಿದ್ದಾರೆ. ಅವರು ನವಲಿ ಜಲಾಶಯದ ಬಗ್ಗೆ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿಕೊಳ್ಳುವುದು ಬೇಡ.
ಇದು ಮೂರು ರಾಜ್ಯಗಳ ವಿಚಾರವಾಗಿದ್ದು ಹೊಂದಾಣಿಕೆಯಿಂದ ನಿರ್ಧಾರವಾಗಲಿ’ ಎಂದು ತಿಳಿಸಿದ್ದಾರೆ.
‘ರಕ್ಷಣಾ ಸಚಿವ ರಾಜನಾಥಸಿಂಗ್ ಅವರ ಮೇಲೆ ಒತ್ತಡ ಹಾಕಿ ಸಿಂಧನೂರಿನ ಶ್ರೀಕೃಷ್ಣದೇವರಾಯ ವಿದ್ಯಾ ಸಂಸ್ಥೆಗೆ ಸೈನಿಕ ಶಾಲೆ ಮಂಜೂರು ಮಾಡಿಸಲಾಗಿದೆ. ಇದರಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಇದರ ಸದುಪಯೋಗ ಎಲ್ಲರೂ ಪಡೆಯಬೇಕು’ ಎಂದು ಹೇಳಿದ್ದಾರೆ.
ಈಚೆಗೆ ಭದ್ರಾವತಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒಪ್ಪಿಸಿ ವಿಶಾಖಪಟ್ಟಣ ಉಕ್ಕಿನ ಕಾರ್ಖಾನೆಯ ₹35,000 ಕೋಟಿ ಸಾಲ ತೀರಿಸಿ ಪುನರ್ ಆರಂಭಿದ್ದೇನೆ. ಈಗ ಅಲ್ಲಿ ನಿತ್ಯ 21 ಟನ್ ಉಕ್ಕು ಉತ್ಪಾದನೆ ಆಗುತ್ತಿದೆ’ ಎಂದಿದ್ದರು.