‘ಎಲ್ಲವನ್ನು ಸರಿಪಡಿಸಿಕೊಳ್ಳೋಣ’; ಬಿಸಿಸಿಐಗೆ ಪತ್ರ ಬರೆದ ಬಾಂಗ್ಲಾ ಕ್ರಿಕೆಟ್ ಮಂಡಳಿ
Bangladesh Cricket Board Writes to BCCI: ಬಿಸಿಸಿಐ ಜೊತೆ ಜಿದ್ದಿಗೆ ಬಿದ್ದಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ), ಐಪಿಎಲ್ ಹಾಗೂ ಟಿ20 ವಿಶ್ವಕಪ್ ಕಳೆದುಕೊಂಡ ನಂತರ ಈಗ ಸಂಬಂಧ ಸುಧಾರಣೆಗೆ ಮುಂದಾಗಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಸಿಸಿಐಗೆ ಪತ್ರ ಬರೆದಿದ್ದು, ಮುಂದಿನ ಸರಣಿಗಳು ಹಾಗೂ ಏಷ್ಯಾಕಪ್ ಅಪಾಯಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಆರ್ಥಿಕ ನಷ್ಟ ತಪ್ಪಿಸಲು ಬಿಸಿಬಿ ಈ ಮಹತ್ವದ ಹೆಜ್ಜೆ ಇಟ್ಟಿದೆ. ಬಿಸಿಸಿಐ (BCCI) ಎದುರು ತೊಡೆ ತಟ್ಟಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಇದೀಗ ಸೋತು ಶರಣಾದಂತೆ ತೋರುತ್ತಿದೆ. ಬಿಸಿಸಿಐ ಜೊತೆ ಜಿದ್ದಿಗೆ ಬಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇದರ ಪರಿಣಾಮವಾಗಿ ತನ್ನ ತಂಡದ ಆಟಗಾರರು ಐಪಿಎಲ್ ಆಡದಂತ್ತಾಯಿತು.
ಇದರ ಜೊತೆಗೆ ತನ್ನ ತಂಡ ಟಿ20 ವಿಶ್ವಕಪ್ನಲ್ಲಿ ಭಾಗವಹಿಸದಂತ್ತಾಯಿತು. ಇದೀಗ ಮುಂಬರುವ ಉಭಯ ದೇಶಗಳ ಸರಣಿಯೂ ರದ್ದಾಗುವ ಸಾಧ್ಯತೆಯಿದೆ. ಹಾಗೆಯೇ ಮುಂದಿನ ಆವೃತ್ತಿಯ ಏಷ್ಯಾಕಪ್ ಕೂಡ ಕೈಜಾರುವ ಸ್ಥಿತಿಯಲ್ಲಿದೆ. ಈಗಾಗಲೇ ನಷ್ಟದ ಸುಳಿಯಲ್ಲಿ ಸಿಲುಕಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಬಿಸಿಸಿಐನೊಂದಿಗೆ ಸಂಬಂಧ ಮತ್ತಷ್ಟು ಹಳಸಿದರೆ, ಪಾತಾಳಕ್ಕೆ ಕುಸಿಯಲಿದೆ. ಹೀಗಾಗಿ ಅದಗೆಟ್ಟಿರುವ ಸಂಬಂಧವನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಬಿಸಿಸಿಐಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ.ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಬಿಸಿಸಿಐಗೆ ಪತ್ರ ಬರೆದಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ . ಭಾರತ ಮತ್ತು ಬಾಂಗ್ಲಾದೇಶ ನಡುವಿನ ದೀರ್ಘಕಾಲದ ಕ್ರಿಕೆಟ್ ಸಂಬಂಧಗಳನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು.
ಎರಡು ಮಂಡಳಿಗಳ ನಡುವಿನ ಸಂಬಂಧವನ್ನು ಪುನಃಸ್ಥಾಪಿಸುವ ಬಯಕೆಯನ್ನು ವ್ಯಕ್ತಪಡಿಸಲಾಗಿದೆ ಎಂದು ಬಿಸಿಸಿಐ ಮತ್ತು ಬಿಸಿಬಿಯ ಮೂಲಗಳು ತಿಳಿಸಿವೆ.
ಬಾಂಗ್ಲಾ ಮಂಡಳಿಗೆ ಸಾಲು ಸಾಲು ಸಂಕಷ್ಟ
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿಲುವು ಬದಲಾವಣೆಗೆ ಪ್ರಮುಖ ಕಾರಣ ಮುಂಬರುವ ಪ್ರಮುಖ ಟೂರ್ನಮೆಂಟ್ ಮತ್ತು ಸರಣಿ. ಭಾರತ ಮತ್ತು ಬಾಂಗ್ಲಾದೇಶ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿವೆ, ಇದಕ್ಕಾಗಿ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಮಾಡಬೇಕಾಗಿದೆ. ಈ ಸರಣಿಯನ್ನು ಮೂಲತಃ ಕಳೆದ ವರ್ಷ ಆಡಲು ನಿರ್ಧರಿಸಲಾಗಿತ್ತು, ಆದರೆ ಬಾಂಗ್ಲಾದೇಶದ ಪರಿಸ್ಥಿತಿಯಿಂದಾಗಿ, ಅದನ್ನು ಸೆಪ್ಟೆಂಬರ್ 2026 ಕ್ಕೆ ಮುಂದೂಡಲು ನಿರ್ಧರಿಸಲಾಯಿತು. ಆದಾಗ್ಯೂ, ಐಪಿಎಲ್ ಮತ್ತು ಟಿ20 ವಿಶ್ವಕಪ್ ಸುತ್ತಲಿನ ವಿವಾದವು ಈ ಸರಣಿಯನ್ನು ಅಪಾಯಕ್ಕೆ ಸಿಲುಕಿಸಿದೆ.