Srinagar: ಉಗ್ರರ ಜತೆ ನಂಟು: ಕಾಶ್ಮೀರದ ಹಲವು ಸ್ಥಳಗಳಲ್ಲಿ ಏಕಕಾಲಕ್ಕೆ ಎನ್‌ಐಎ ದಾಳಿ
ಶ್ರೀನಗರ: ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೋಮವಾರ ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ದೆಹಲಿಯ ಕೆಂಪು ಕೋಟೆಯ ಬಳಿ ನಡೆದಿದ್ದ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶೋಧ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಐಎ ತಂಡಗಳು ಇಂದು ಬೆಳ್ಳಂಬೆಳಗ್ಗೆ ಕಾಶ್ಮೀರ ಕಣಿವೆಯ ಪ್ರಮುಖ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಮುಖ್ಯವಾಗಿ ಕುಪ್ವಾರ ಜಿಲ್ಲೆಯ ಹಂದ್ವಾರ ಮತ್ತು ಕುಲಗಾಂ ಜಿಲ್ಲೆಗಳಲ್ಲಿ ತಪಾಸಣೆ ನಡೆಸಲಾಗಿದೆ.
ಇಲ್ಲಿನ ಗುಲೂರಾ ಪ್ರದೇಶದಲ್ಲಿರುವ ಪ್ರಮುಖ ಉದ್ಯಮಿಯೊಬ್ಬರ ನಿವಾಸದ ಮೇಲೆ ದಾಳಿ ಮಾಡಲಾಗಿದ್ದು, ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ದೆಹಲಿ ಸ್ಫೋಟದ ಲಿಂಕ್!
ಕಳೆದ ನವೆಂಬರ್‌ನಲ್ಲಿ ದೆಹಲಿಯ ಕೆಂಪು ಕೋಟೆಯ ಸಮೀಪ ನಡೆದಿದ್ದ ಸ್ಫೋಟದ ತನಿಖೆಯ ಭಾಗವಾಗಿ ಈ ದಾಳಿಗಳನ್ನು ನಡೆಸಲಾಗುತ್ತಿದೆ. ಈ ಸ್ಫೋಟದಲ್ಲಿ ಜೈಷ್-ಎ-ಮೊಹಮ್ಮದ್ (JeM) ಸಂಘಟನೆಯ ಕೈವಾಡವಿರುವ ಶಂಕೆಯಿದ್ದು, ಸ್ಥಳೀಯ ಸಂಪರ್ಕಗಳ ಕುರಿತು ಎನ್‌ಐಎ ಮಾಹಿತಿ ಕಲೆಹಾಕುತ್ತಿದೆ. ದಾಳಿಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಆರ್‌ಪಿಎಫ್ (CRPF) ಮತ್ತು ಜಮ್ಮು-ಕಾಶ್ಮೀರ ಪೊಲೀಸರಿಂದ ಭದ್ರತೆಯನ್ನು ಒದಗಿಸಲಾಗಿತ್ತು. ಗಡಿ ಜಿಲ್ಲೆಗಳಲ್ಲಿ ಉಗ್ರರ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಎನ್‌ಐಎ ಕಳೆದ ಕೆಲವು ದಿನಗಳಿಂದ ಸರಣಿ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.