Airport Runway: ಅಗ್ನಿಶಾಮಕ ವಾಹನಕ್ಕೆ ಏರ್ ಕೆನಡಾ ವಿಮಾನ ಡಿಕ್ಕಿ: ಹಲವರಿಗೆ ಗಾಯ
ನ್ಯೂಯಾರ್ಕ್: ಅಮೆರಿಕದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಲಾ ಗಾರ್ಡಿಯಾ (LaGuardia) ವಿಮಾನ ನಿಲ್ದಾಣದ ರನ್‌ವೇಯಲ್ಲಿ ಸೋಮವಾರ(ಮಾ.23) ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ.
ಕೆನಡಾದಿಂದ ಆಗಮಿಸಿದ ಏರ್ ಕೆನಡಾ ಎಕ್ಸ್‌ಪ್ರೆಸ್ (Air Canada Express) ವಿಮಾನವು ರನ್‌ವೇಯಲ್ಲಿ ಚಲಿಸುತ್ತಿದ್ದ ಅಗ್ನಿಶಾಮಕ ದಳದ ವಾಹನಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಹಲವು ಪ್ರಯಾಣಿಕರು ಹಾಗೂ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರನ್‌ವೇ 4ರಲ್ಲಿ ಘಟಿಸಿದ ದುರಂತ
ಮಾಹಿತಿಗಳ ಪ್ರಕಾರ, ಮಾಂಟ್ರಿಯಲ್‌ನಿಂದ ಬಂದ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನವು ರನ್‌ವೇ 4ರಲ್ಲಿ ಇಳಿಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ವಿಮಾನದ ಮುಂಭಾಗಸಂಪೂರ್ಣವಾಗಿ ಜಖಂಗೊಂಡಿದೆ. ವಿಮಾನದ ಮೂಗು ಗಾಳಿಯಲ್ಲಿ ಮೇಲಕ್ಕೆ ಚಾಚಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರಯಾಣಿಕರಲ್ಲಿ ಭೀತಿ ಮೂಡಿಸಿದೆ.
ಅಪಘಾತ ಸಂಭವಿಸಿದ ತಕ್ಷಣ ವಿಮಾನದಲ್ಲಿದ್ದ ಪ್ರಯಾಣಿಕರನ್ನು ತುರ್ತು ದ್ವಾರಗಳ ಮೂಲಕ ಸ್ಥಳಾಂತರಿಸಲಾಯಿತು. ಪ್ರಾಥಮಿಕ ವರದಿಗಳ ಪ್ರಕಾರ, ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ನಿಖರ ಸಂಖ್ಯೆ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ವಿಮಾನ ಸಂಚಾರ ಸ್ಥಗಿತ:
ದುರಂತದ ಹಿನ್ನೆಲೆಯಲ್ಲಿ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ಲಾ ಗಾರ್ಡಿಯಾ ವಿಮಾನ ನಿಲ್ದಾಣದ ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದು, ಬೇರೆಡೆಗೆ ಹೊರಡಬೇಕಿದ್ದ ವಿಮಾನಗಳ ವೇಳಾಪಟ್ಟಿಯಲ್ಲಿ ಭಾರಿ ವ್ಯತ್ಯಯವಾಗಿದೆ.