ಟಿಕೆಟ್ ಘೋಷಣೆಯಾಗದೆ ಇಬ್ಬರು ನಾಮಪತ್ರ; ಕೈ ಹೈಕಮಾಂಡ್ ಗೆ ಕಗ್ಗಂಟಾದ ದಾವಣಗೆರೆ ದಕ್ಷಿಣ
ದಾವಣಗೆರೆ: ಉಪ ಚುನಾಚಣೆ ಎದುರಿಸುತ್ತಿರುವ ದಾವಣಗೆರೆ ದಕ್ಷಿಣ ಕ್ಷೇತ್ರ ಇದೀಗ ಹಲವು ರಾಜಕೀಯ ಕಸರತ್ತುಗಳಿಗೆ ಸಾಕ್ಷಿಯಾಗುತ್ತಿದೆ. ಬಿಜೆಪಿ ಈಗಾಗಲೇ ಟಿಕೆಟ್ ಘೋಷಣೆ ಮಾಡಿದ್ದರೆ, ಕಾಂಗ್ರೆಸ್ ನಲ್ಲಿ ಕಗ್ಗಂಟು ಮುಂದುವರಿದಿದೆ.
ಶುಕ್ರವಾರ (ಮಾ.20) ಕಾಂಗ್ರೆಸ್ ನಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಟಿಕೆಟ್ ಘೋಷಣೆಗೆ ಮೊದಲೇ ಎರಡು ನಾಮಪತ್ರ ಸಲ್ಲಿಕೆಯಾಗಿದೆ. ಒಂದೆಡೆ ಶಾಮನೂರು ಕುಟುಂಬದ ಸಮರ್ಥ್ ಮಲ್ಲಿಕಾರ್ಜುನ್ ನಾಮಪತ್ರ ಸಲ್ಲಿಸಿದ್ದು, ಮತ್ತೊಂದೆಡೆ ಅಲ್ಪಸಂಖ್ಯಾತ ಮುಖಂಡ ಸಾದಿಕ್ ಪೈಲ್ವಾನ್ ಕೂಡಾ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ಪ್ರತಿನಿಧಿಸುತ್ತಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ನೀಡುವುದು ಎನ್ನುವುದೇ ಕಾಂಗ್ರೆಸ್ ತಲೆನೋವಿಗೆ ಕಾರಣವಾಗಿದೆ.
ಒಂದೆಡೆ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯ ಕೇಳಿಬಂದರೆ ಮತ್ತೊಂದೆಡೆ ಕ್ಷೇತ್ರದಲ್ಲಿ ಪ್ರಬಲವಾಗಿರುವ ಮುಸ್ಲಿಂ ಸಂಘಟನೆಯೂ ತಮ್ಮ ಉಮೇದುವಾರಿಕೆ ತೋರಿಸುತ್ತಿದೆ.
ಬಿ ಫಾರ್ಮ್ ಇಲ್ಲದೆ ನಾಮಪತ್ರ
ಸಚಿವ ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ತಾಯಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿ ಫಾರ್ಮ್ ಇಲ್ಲದೆ ಇದ್ದರೂ, ವರಿಷ್ಠರು ತಮಗೆ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮುಹೂರ್ತ ಚೆನ್ನಾಗಿರುವ ಕಾರಣ ಶುಕ್ರವಾರವೇ ನಾಮಪತ್ರ ಸಲ್ಲಿಸಿದ್ದೇವೆ ಎಂದು ಶಾಮನೂರು ಕುಟುಂಬ ಹೇಳಿಕೊಂಡಿದೆ.
ಮತ್ತೊಂದೆಡೆ ತಮಗೆ ಟಿಕೆಟ್ ಸಿಗುವ ವಿಶ್ವಾಸದಿಂದ ಕಾಂಗ್ರೆಸ್ ನ ಅಲ್ಪಸಂಖ್ಯಾತ ಮುಖಂಡ ಸಾದಿಕ್ ಪೈಲ್ವಾನ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.