ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕನ್ನಡದ ಅಬ್ಬರ; ಕಾಸರಗೋಡು ಬಿಜೆಪಿ ಅಭ್ಯರ್ಥಿಯಿಂದ ಕನ್ನಡದಲ್ಲೇ ಪ್ರಚಾರ!
ಕೇರಳದಲ್ಲಿರುವ ಕಾಸರಗೋಡು ಕನ್ನಡರೇ ಹೆಚ್ಚಾಗಿರುವಂತಹ ಪ್ರದೇಶವಾಗಿದೆ. ಇದು ಕರ್ನಾಟಕದ ಭಾಗವೆಂದು ಹಲವು ಹೋರಾಟ ನಡೆದರೂ ರಾಜ್ಯಗಳ ಗಡಿ ಹಂಚಿಕೆ ವೇಳೆ ಇದನ್ನು ಕೇರಳಕ್ಕೆ ಬಿಟ್ಟುಕೊಟ್ಟಿದ್ದರಿಂದ ಬಹುಪಾಲು ಕನ್ನಡಿಗರು ಅನಿವಾರ್ಯವಾಗಿ ಕೇರಳಕ್ಕೆ ಸೇರಿದ್ದಾರೆ. ಆದರೆ, ಕಾಸರಗೋಡಿನ ಜನಪ್ರತಿನಿಧಿಗಳು ಮಾತ್ರ ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿಯೂ ಮಾತನಾಡಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಸರಗೋಡಿನ ಎನ್‌ಡಿಎ ಅಭ್ಯರ್ಥಿಯಾಗಿರುವ ಅಶ್ವಿನಿ ಎಂ.ಎಲ್. ಅವರು ಕನ್ನಡದಲ್ಲಿಯೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಕೇರಳದ ಸಪ್ತಭಾಷಾ ಸಂಗಮ ಭೂಮಿ ಕಾಸರಗೋಡಿನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ಬಾರಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಶ್ವಿನಿ ಎಂ.ಎಲ್. ಅವರು ತಮ್ಮ ವಿಭಿನ್ನ ಪ್ರಚಾರ ಶೈಲಿಯ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ. ವಿಶೇಷವೆಂದರೆ, ಕೇರಳದ ಮಣ್ಣಿನಲ್ಲಿ ನಿಂತು ಅವರು ಅಪ್ಪಟ ಕನ್ನಡದಲ್ಲಿ ಮತಯಾಚನೆ ಮಾಡುವ ಮೂಲಕ ಕನ್ನಡಿಗರ ಮನಗೆಲ್ಲಲು ಮುಂದಾಗಿದ್ದಾರೆ.
ಕನ್ನಡದಲ್ಲಿ ಮತಯಾಚನೆ:
ಇತ್ತೀಚೆಗೆ ಅಶ್ವಿನಿ ಎಂ.ಎಲ್. ಅವರು ತಮ್ಮ ಅಧಿಕೃತ ಟ್ವಿಟರ್ (X) ಖಾತೆಯಲ್ಲಿ ಚುನಾವಣಾ ಪ್ರಚಾರದ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ಕನ್ನಡ ಮತ್ತು ಮಲೆಯಾಳಂ ಎರಡೂ ಭಾಷೆಗಳಲ್ಲಿದ್ದು, ಗಡಿಭಾಗದ ಕನ್ನಡಿಗರನ್ನು ವಿಶೇಷವಾಗಿ ತಲುಪುವ ಉದ್ದೇಶವನ್ನು ಹೊಂದಿದೆ. 'ಕಾಸರಗೋಡಿನ ಜನತೆಗೆ ನನ್ನ ನಮಸ್ಕಾರಗಳು. ಮುಂಬರುವ ಚುನಾವಣೆಯಲ್ಲಿ ನಾನು ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ' ಎಂದು ಅವರು ಕನ್ನಡಿಗರನ್ನು ಉದ್ದೇಶಿಸಿ ಬರೆದುಕೊಂಡಿದ್ದಾರೆ.
ಅಭಿವೃದ್ಧಿ ಮತ್ತು ಸಂಸ್ಕೃತಿಯ ಮಂತ್ರ:
ತಮ್ಮ ಪೋಸ್ಟ್‌ನಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಭರವಸೆ ನೀಡಿರುವ ಅಶ್ವಿನಿ, ಕೇವಲ ಮೂಲಸೌಕರ್ಯ ಮಾತ್ರವಲ್ಲದೆ ಕಾಸರಗೋಡಿನ ವಿಶಿಷ್ಟ ಪರಂಪರೆಯನ್ನು ಎತ್ತಿ ಹಿಡಿಯುವ ಆಶಯ ವ್ಯಕ್ತಪಡಿಸಿದ್ದಾರೆ. "ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ, ನಮ್ಮ ಸಂಪ್ರದಾಯಗಳನ್ನು ಉಳಿಸಲು ಹಾಗೂ ನಮ್ಮ ಸಂಸ್ಕೃತಿ ಮತ್ತು ನಂಬಿಕೆಗಳನ್ನು ರಕ್ಷಿಸಲು, ನಾನು ನಿಮ್ಮ ಬೆಂಬಲ, ಆಶೀರ್ವಾದ ಮತ್ತು ಅಮೂಲ್ಯವಾದ ಮತವನ್ನು ವಿನಮ್ರವಾಗಿ ಕೋರುತ್ತೇನೆ" ಎಂದು ಅವರು ವಿನಂತಿಸಿದ್ದಾರೆ.
ಗಡಿಭಾಗದಲ್ಲಿ ಕನ್ನಡದ ಪ್ರಾಮುಖ್ಯತೆ:
ಕಾಸರಗೋಡು ಜಿಲ್ಲೆಯು ಕರ್ನಾಟಕ ಮತ್ತು ಕೇರಳದ ಗಡಿಭಾಗದಲ್ಲಿದ್ದು, ಇಲ್ಲಿ ಅಪಾರ ಸಂಖ್ಯೆಯ ಕನ್ನಡ ಮಾತನಾಡುವ ಜನರಿದ್ದಾರೆ. ರಾಜಕೀಯವಾಗಿ ಕಾಸರಗೋಡಿನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಹೋರಾಟ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
ಇಂತಹ ಸಂದರ್ಭದಲ್ಲಿ ಎನ್‌ಡಿಎ ಅಭ್ಯರ್ಥಿಯೊಬ್ಬರು ಕನ್ನಡ ಭಾಷೆಯನ್ನು ಪ್ರಚಾರದ ಪ್ರಮುಖ ಮಾಧ್ಯಮವನ್ನಾಗಿ ಬಳಸಿಕೊಂಡಿರುವುದು ಗಡಿ ಕನ್ನಡಿಗರಲ್ಲಿ ಹೊಸ ಭರವಸೆ ಮೂಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್:
ಅಶ್ವಿನಿ ಅವರ ಈ ಕನ್ನಡ ಪ್ರೇಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. #VikasitaKeralamModikkoppam ಮತ್ತು #MattamThudangamModikkoppam ಎಂಬ ಹ್ಯಾಶ್‌ಟ್ಯಾಗ್‌ಗಳ ಅಡಿಯಲ್ಲಿ ಅವರ ಪೋಸ್ಟ್ ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇರಳದ ಅಭಿವೃದ್ಧಿಯಾಗಬೇಕು ಎಂಬ ಘೋಷಣೆಯೊಂದಿಗೆ ಅವರು ಮನೆಮನೆಗೆ ತಲುಪುತ್ತಿದ್ದಾರೆ. ಕಾಸರಗೋಡಿನ ಈ ಬಹುಭಾಷಾ ಚುನಾವಣಾ ಕಣದಲ್ಲಿ ಅಶ್ವಿನಿ ಎಂ.ಎಲ್. ಅವರ ಈ ಕನ್ನಡದ ನಡೆ ಮತದಾರರ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.