ಕೆಪಿಎಸ್‌ಸಿ ರಿಪೇರಿಗೆ ಸರ್ಕಾರದ ಪರಿಹಾರ ಸೂತ್ರ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಕಾರ್ಯಗಳಲ್ಲಿ ಸುಧಾರಣೆಗೆ ಶಿಫಾರಸು ಮಾಡಲು ಸದನ ಸಮಿತಿ ರಚಿಸುವುದು ಹಾಗೂ ಅಗತ್ಯವಿದ್ದರೆ ಕೆಪಿಎಸ್‌ಸಿ ಮೇಲೆ ನಿಗಾವಹಿಸಲು ಸಚಿವ ಸಂಪುಟ ಉಪಸಮಿತಿ ರಚಿಸುವುದಾಗಿ ಸರ್ಕಾರ ತಿಳಿಸಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ತಡೆ ಕುರಿತಂತೆ ಸದನದಲ್ಲಿ ನಡೆಸಲಾಗಿದ್ದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಉತ್ತರ ನೀಡಿದರು. ಕೆಪಿಎಸ್‌ಸಿ ಸಾಂವಿಧಾನಿಕ ಸಂಸ್ಥೆಯಾದ ಕಾರಣ ಸರ್ಕಾರ ನೇರವಾಗಿ ಕೆಪಿಎಸ್‌ಸಿ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.
ಹೀಗಾಗಿ ಪರೀಕ್ಷಾ ಕ್ರಮದಲ್ಲಿ ಬದಲಾವಣೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಕೆಪಿಎಸ್‌ಸಿ ಸುಧಾರಣೆಗೆ ಹೋಟಾ ಸಮಿತಿ ನೀಡಿರುವ ಶಿಫಾರಸನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಈ ಹಿಂದೆ ನಾನು ಕೃಷಿ ಸಚಿವನಾಗಿದ್ದಾಗ ಕೆಪಿಎಸ್‌ಸಿ ಬದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಮೂಲಕ 630 ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದೆ. ಈಗ ಕಂದಾಯ ಸಚಿವನಾಗಿ ಕೆಇಎ ಮೂಲಕವೇ 1000 ಗ್ರಾಮ ಲೆಕ್ಕಿಗರನ್ನು ನೇಮಕ ಮಾಡಿದ್ದೇನೆ. ಕೆಇಎ ನಡೆಸುವ ಯಾವುದೇ ಪರೀಕ್ಷೆಯಲ್ಲೂ ಗೊಂದಲ ಮತ್ತು ಅಕ್ರಮಗಳ ಆರೋಪ ಬಂದಿಲ್ಲ. ಆದರೆ, ಕೆಪಿಎಸ್‌ಸಿ ಮೂಲಕ ನಡೆಸಲಾಗುವ ಪರೀಕ್ಷೆಗಳು ಒಂದಿಲ್ಲೊಂದು ಗೊಂದಲ ಸೃಷ್ಟಿಯಾಗಿ ಅಭ್ಯರ್ಥಿಗಳು ಪರದಾಡುವಂತಾಗುತ್ತದೆ ಎಂದರು.