Kerala poll: ಬಿಜೆಪಿ-ಎನ್‌ಡಿಎಯಿಂದ 'ಸಕಾರಾತ್ಮಕ ರಾಜಕಾರಣ': ರಾಜೀವ್ ಚಂದ್ರಶೇಖರ್
ತಿರುವನಂತಪುರಂ: ಮುಂಬರುವ ಕೇರಳ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟವು ಕೇವಲ 'ಸಕಾರಾತ್ಮಕ ರಾಜಕಾರಣ'ವನ್ನು ಜನರ ಮುಂದೆ ಇಡಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಸೋಮವಾರ ತಿಳಿಸಿದ್ದಾರೆ.
ಕಾಂಗ್ರೆಸ್ ಹಾಗೂ ಸಿಪಿಐ(ಎಂ) ತೊರೆದ ಗಣ್ಯರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, "ಚುನಾವಣೆಗೆ ಇನ್ನು ಕೇವಲ 23 ದಿನಗಳಷ್ಟೇ ಬಾಕಿ ಇದ್ದು, ಜನಸಾಮಾನ್ಯರ ಸಮಸ್ಯೆಗಳ ಆಧಾರದ ಮೇಲೆ ನಾವು ಪ್ರಚಾರ ನಡೆಸಲಿದ್ದೇವೆ. ವಿರೋಧ ಪಕ್ಷಗಳು ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದು, ಮತದಾರರು ಇಂತಹ ತಂತ್ರಗಳಿಗೆ ಮರುಳಾಗಬಾರದು" ಎಂದು ಮನವಿ ಮಾಡಿದರು.
ಈ ಬಾರಿಯ ಚುನಾವಣೆ ಕೇರಳದ ಭವಿಷ್ಯವನ್ನು ನಿರ್ಧರಿಸುವ ನಿರ್ಣಾಯಕ ಘಟ್ಟವಾಗಿದೆ. ಆದ್ದರಿಂದ ಬಿಜೆಪಿ 'ಅಭಿವೃದ್ಧಿ ರಾಜಕಾರಣ'ಕ್ಕೆ ಆದ್ಯತೆ ನೀಡಲಿದೆ ಎಂದು ಅವರು ಹೇಳಿದರು.
ಬಿಜೆಪಿ ಪಕ್ಷಕ್ಕೆ ಸೇರ್ಪಡೆ
ಬಿಜೆಪಿಯ ಸಿದ್ಧಾಂತ ಮತ್ತು ಪ್ರಧಾನಿ ಮೋದಿಯವರ ಕಾರ್ಯವೈಖರಿ ಮೆಚ್ಚಿ ಕಾಂಗ್ರೆಸ್ ನಾಯಕ ತೋಡಿಯೂರು ರಾಮಚಂದ್ರನ್, ಖ್ಯಾತ ಹೃದ್ರೋಗ ತಜ್ಞ ಡಾ. ಪ್ರತಾಪ್ ಕುಮಾರ್ ಹಾಗೂ ಸಿಪಿಐ(ಎಂ) ನಾಯಕ ಎನ್.ಎ. ರಶೀದ್ ಅವರು ಕೇರಳ ಬಿಜೆಪಿ ಅಧ್ಯಕ್ಷರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಪಕ್ಷದ ಚುನಾವಣಾ ಪ್ರಚಾರದ ಗೀತೆಯನ್ನು ಸಹ ಬಿಡುಗಡೆ ಮಾಡಲಾಯಿತು.