ಬರೋಬ್ಬರಿ 228 ಕೋಟಿ ಬ್ಯಾಂಕ್ ವಂಚನೆ ಪ್ರಕರಣ: ಸಿಬಿಐನಿಂದ 6 ಗಂಟೆ ಅನಿಲ್ ಅಂಬಾನಿ ಪುತ್ರ ಜೈ ವಿಚಾರಣೆ
ನವದೆಹಲಿ: ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (Reliance Home Finance Limited-RHFL) ಸಂಸ್ಥೆಗೆ ಸಂಬಂಧಿಸಿದ 228 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆ, ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್ ಅಂಬಾನಿ ಅವರನ್ನು ಕೇಂದ್ರ ತನಿಖಾ ದಳ (Central Bureau of Investigation – CBI) ಶುಕ್ರವಾರ ನವದೆಹಲಿಯಲ್ಲಿ ಸುದೀರ್ಘವಾಗಿ ವಿಚಾರಣೆ ನಡೆಸಿತು. ದಿವಾಳಿಯಾಗಿರುವ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಪುತ್ರರಾಗಿರುವ ಜೈ ಅನ್ಮೋಲ್ ಅಂಬಾನಿ, ಸಮನ್ಸ್ ಹಿನ್ನೆಲೆಯಲ್ಲಿ ದೆಹಲಿಯ ಸಿಬಿಐ ಮುಖ್ಯ ಕಚೇರಿಯಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದು, ಅವರನ್ನು ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೊಳಪಡಿಸಲಾಯಿತು.
ಸಿಬಿಐ ಅಧಿಕಾರಿಗಳ ಪ್ರಕಾರ, ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ನಡೆದಿರುವ ಆರ್ಥಿಕ ಅಕ್ರಮಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಜೈ ಅನ್ಮೋಲ್ ಅಂಬಾನಿಯನ್ನು ಪ್ರಶ್ನಿಸಲಾಗಿದೆ. ಸುದೀರ್ಘ ವಿಚಾರಣೆಯ ನಂತರ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಶನಿವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಯೂನಿಯನ್ ಬ್ಯಾಂಕ್ ದೂರಿನ ಆಧಾರದ ಮೇಲೆ ಪ್ರಕರಣ
ಸಿಬಿಐ ಡಿಸೆಂಬರ್ 6, 2025 ರಂದು RHFL, ಜೈ ಅನ್ಮೋಲ್ ಅಂಬಾನಿ, ಮಾಜಿ ಸಿಇಒ ಮತ್ತು ಪೂರ್ಣಾವಧಿ ನಿರ್ದೇಶಕ ರವೀಂದ್ರ ಸುಧಾಲ್ಕರ್ ಹಾಗೂ ಅಪರಿಚಿತ ವ್ಯಕ್ತಿಗಳು ಮತ್ತು ಗುರುತಿಸಲಾಗದ ಕೆಲವು ಸಾರ್ವಜನಿಕ ಸೇವಕರ ವಿರುದ್ಧ ಪ್ರಕರಣ ದಾಖಲಿಸಿತ್ತು.
ಈ ಪ್ರಕರಣವು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) ನೀಡಿದ ದೂರಿನ ಮೇರೆಗೆ ದಾಖಲಾಗಿದ್ದು, ಕ್ರಿಮಿನಲ್ ಪಿತೂರಿ, ವಂಚನೆ ಹಾಗೂ ಕ್ರಿಮಿನಲ್ ದುಷ್ಕೃತ್ಯದ ಪರಿಣಾಮವಾಗಿ ಹಿಂದಿನ ಆಂಧ್ರ ಬ್ಯಾಂಕ್ ಗೆ ಸುಮಾರು 228.06 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ. ತನಿಖಾಧಿಕಾರಿಗಳ ಮಾಹಿತಿಯಂತೆ, ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನ ಸಾಲ ಖಾತೆಯನ್ನು ಸೆಪ್ಟೆಂಬರ್ 30, 2019 ರಂದು ಅನುತ್ಪಾದಕ ಆಸ್ತಿ (NPA) ಎಂದು ಘೋಷಿಸಲಾಗಿತ್ತು. ಬಳಿಕ ದೀರ್ಘ ಪರಿಶೀಲನೆಯ ನಂತರ ಅಕ್ಟೋಬರ್ 10, 2024 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈ ಖಾತೆಯನ್ನು ಅಧಿಕೃತವಾಗಿ ವಂಚನೆ ಖಾತೆ ಎಂದು ವರ್ಗೀಕರಿಸಿತು.