ಮನೀಷಾ ಮಿಂಚು: ಮಹಿಳೆಯರ ವಿಶ್ವಕಪ್ ಹಾಕಿ ಅರ್ಹತಾ ಟೂರ್ನಿಯ ಫೈನಲ್‌ಗೆ ಭಾರತ
ಹೈದರಾಬಾದ್: ಮನೀಷಾ ಚೌಹಾಣ್ ಅವರು ಗಳಿಸಿದ ಏಕೈಕ ಗೋಲಿನ ಬಲದಿಂದ ಭಾರತ ಮಹಿಳೆಯರ ಹಾಕಿ ತಂಡವು ವಿಶ್ವಕಪ್ ಅರ್ಹತಾ ಸುತ್ತಿನ ಸೆಮಿಫೈನಲ್‌ನಲ್ಲಿ ಜಯಭೇರಿ ಬಾರಿಸಿತು. ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿತು. ಅಂತಿಮ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಜಿ.ಎಂ.ಸಿ. ಬಾಲಯೋಗಿ (ಗಚ್ಚಿಬೌಲಿ ಹಾಕಿ ಸಂಕೀರ್ಣ) ಕ್ರೀಡಾಂಗಣದಲ್ಲಿ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತವು ಇಟಲಿ ವಿರುದ್ಧ 1–0ಯಿಂದ ಗೆದ್ದಿತು.
ಈ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳೂ ರೋಚಕ ಹಣಾಹಣಿ ನಡೆಸಿದವು. ಈ ಅವಧಿಯಲ್ಲಿ ಮಿಡ್‌ಫೀಲ್ಡ್‌ನಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಉಭಯ ಆಟಗಾರ್ತಿಯರು ಪೈಪೋಟಿ ನಡೆಸಿದರು.
ಈ ಹೊತ್ತಿನಲ್ಲಿ ಇಟಲಿಯ ಆಟಗಾರ್ತಿಯರು ಆಕ್ರಮಣಶೈಲಿಯ ಆಟವಾಡಿದರು. ಇದರಿಂದಾಗಿ ಅವರಿಗೆ ಗೋಲು ಗಳಿಸುವ ಕೆಲವು ಅವಕಾಶಗಳೂ ಸೃಷ್ಟಿಯಾಗಿದ್ದವು. ಆದರೆ ಫಲಪ್ರದವಾಗಲಿಲ್ಲ.
ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಮರುಹೋರಾಟ ಮಾಡಿತು. 18ನೇ ನಿಮಿಷದಲ್ಲಿ ಭಾರತವು ಮೊದಲ ಪೆನಾಲ್ಟಿ ಕಾರ್ನರ್ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. ನವನೀತ್ ಕೌರ್ ಅವರ ಹೊಡೆತವನ್ನು ತಡೆಯುವಲ್ಲಿ ಇಟಲಿ ಗೋಲ್‌ಕೀಪರ್ ಲೂಸಿಯಾ ಐನೆಸ್ ಕಾರುಸೊ ಯಶಸ್ವಿಯಾದರು. 27ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಲಭಿಸಿತು. ಆದರೆ ಅದರಲ್ಲಿಯೂ ಗೋಲು ಆಗಲಿಲ್ಲ. ಇದಾಗಿ ಎರಡು ನಿಮಿಷಗಳ ನಂತರ ಮತ್ತೊಂದು ಪೆನಾಲ್ಟಿ ಕಾರ್ನರ್ ಲಭಿಸಿತು. ನವನೀತ್ ಅವರ ಗುರಿ ತಪ್ಪಿತು.