ರಣಜಿ ಟ್ರೋಫಿ: 11 ವರ್ಷಗಳ ಬಳಿಕ ಫೈನಲ್‌ಗೆ ಕರ್ನಾಟಕ ಎಂಟ್ರಿ; ಪ್ರಶಸ್ತಿಗಾಗಿ ಜಮ್ಮು& ಕಾಶ್ಮೀರ ಜತೆ ಫೈಟ್
ಲಖನೌ: 8 ಬಾರಿ ಚಾಂಪಿಯನ್ ಕರ್ನಾಟಕ ತಂಡ ಬರೋಬ್ಬರಿ 11 ವರ್ಷಗಳ ಬಳಿಕ ರಣಜಿ ಟ್ರೋಫಿ ದೇಸಿ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ಗೇರಿದೆ. 2014-15ರಲ್ಲಿ ಕೊನೆ ಬಾರಿ ಫೈನಲ್‌ಗೇರಿ ಚಾಂಪಿಯನ್ ಆಗಿದ್ದ ರಾಜ್ಯ ತಂಡ, ಬಳಿಕ ಒಮ್ಮೆಯೂ ಪ್ರಶಸ್ತಿ ಸುತ್ತಿಗೇರಿರಲಿಲ್ಲ. ದಶಕದ ಕಾಯುವಿಕೆ ಬಳಿಕ ಈ ಬಾರಿ ಮತ್ತೆ ಟ್ರೋಫಿ ಸನಿಹಕ್ಕೆ ಬಂದಿದೆ.
ಲಖನೌದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಉತ್ತರಾಖಂಡ ಮತ್ತು ಕರ್ನಾಟಕ ನಡುವಿನ ಸೆಮಿಫೈನಲ್ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿತು. ಆದರೆ ಮೊದಲ ಇನಿಂಗ್ಸ್ನಲ್ಲಿ ಪಡೆದಿದ್ದ 503 ರನ್ಗಳ ಬೃಹತ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ. ಚೊಚ್ಚಲ ಬಾರಿ ಫೈನಲ್ ಪ್ರವೇಶಿಸುವ ಉತ್ತರಾಖಂಡದ ಕನಸು ಭಗ್ನಗೊಂಡಿತು.
5 ದಿನಗಳ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಉತ್ತರಾಖಂಡ ನಾಯಕ ಕುನಾಲ್ ಚಂಡೆಲಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಕೆ.ಎಲ್.ರಾಹುಲ್(141), ರವಿಚಂದ್ರನ್ ಸ್ಮರಣ್(135) ಶತಕ ಬಾರಿಸಿದರೆ, ನಾಯಕ ದೇವದತ್ ಪಡಿಕ್ಕಲ್ (232) ದ್ವಿಶತಕ ಸಿಡಿಸಿದ್ದರು.
ಈ ಮೂಲಕ ಕರ್ನಾಟಕ 194.4 ಓವರ್ಗಳಲ್ಲಿ ಬರೋಬ್ಬರಿ 736 ರನ್ಗಳಿಸಿ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಕೇವಲ 233 ರನ್‌ಗೆ ಆಲೌಟಾಗಿ, 503 ರನ್ ಹಿನ್ನಡೆ ಅನುಭವಿಸಿತ್ತು.
ಆದರೆ ಫಾಲೋಆನ್ ಹೇರದ ಕರ್ನಾಟಕ ತಂಡ 2ನೇ ಇನ್ನಿಂಗ್ಸ್ ಆರಂಭಿಸಿ, 4ನೇ ದಿನದಂತ್ಯಕ್ಕೆ 6 ವಿಕೆಟ್ ನಷ್ಟದಲ್ಲಿ 299 ರನ್ ಗಳಿಸಿತ್ತು. ಸ್ಮರಣ್ 127 ರನ್ ಗಳಿಸಿ ಔಟಾಗಿದ್ದರು. ಗುರುವಾರವೂ ಬ್ಯಾಟ್ ಮಾಡಿದ ತಂಡ 323 ರನ್‌ಗೆ ಸರ್ವಪತನ ಕಂಡಿತು. ಕೆ.ಎಲ್.ರಾಹುಲ್ 86 ರನ್ ಗಳಿಸಿ ಅಜೇಯವಾಗಿ ಉಳಿದರು. ಪಂದ್ಯದಲ್ಲಿ ರಾಜ್ಯ ತಂಡ ಒಟ್ಟು 1059 ರನ್ ಕಲೆಹಾಕಿತು.
ಗೆಲುವಿಗೆ 827 ರನ್ ಗುರಿ ಪಡೆದ ಉತ್ತರಾಖಂಡ 6 ವಿಕೆಟ್‌ಗೆ 260 ರನ್ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು. ಅವ್ನೀಶ್ ಸುಧಾ(66), ಸೌರಭ್ ರಾವತ್(ಔಟಾಗದೆ 53) ಹಾಗೂ ಅಭಯ್ ನೇಗಿ(ಔಟಾಗದೆ 57) ಸಿಡಿಸಿದರು. ಶ್ರೇಯಸ್ ಗೋಪಾಲ್ 3 ವಿಕೆಟ್ ಕಿತ್ತರು. ಸ್ಕೋರ್: ಕರ್ನಾಟಕ 736/10 ಮತ್ತು 323/10 (ರಾಹುಲ್ ಔಟಾಗದೆ 86, ಮಯಾಂಕ್ ಮಿಶ್ರಾ 4-69), ಉತ್ತರಾಖಂಡ 233/10 ಮತ್ತು 260/6 (ಅವ್ನೀಶ್ 66, ಅಭಯ್ ಔಟಾಗದೆ 57, ಸೌರಭ್ ಔಟಾಗದೆ 53.